ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ರಾಜಕೀಯ, ಚಿತ್ರರಂಗ, ಸಾಮಾಜಿಕ ಸೇರಿದಂತೆ ಹಲವಾರು ಆಯಾಮಗಳಿವೆ. ಆದ್ದರಿಂದಲೇ ಇದು ನಮ್ಮ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸ್ಕ್ಯಾಂಡಲ್ ಎಂದು ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಸಿಸಿಬಿ ಸಿದ್ಧಪಡಿಸಿರುವ ಚಾರ್ಜ್ ಶೀಟ್ ನಲ್ಲಿ ನಿರೂಪಕಿ ಅನುಶ್ರೀ ಅವರು ಹೆಸರು ಉಲ್ಲೇಖಿಸಿರುವುದು ಬೆಳಕಿಗೆ ಬರುತ್ತಿದ್ದಂತೆ ಮಾಧ್ಯಮಗೋಷ್ಠಿ ನಡೆಸಿದ ಲಂಕೇಶ್ ಸಾಕಷ್ಟು ವಿಚಾರಗಳನ್ನು ಹೊರಹಾಕಿದರು.
ಲಂಕೇಶ್ ಹೇಳಿದ್ದಿಷ್ಟು :
“ಕರ್ನಾಟಕದ ಡ್ರಗ್ಸ್ ಜಾಲದ ಬಗ್ಗೆ ಈ ಹಿಂದೆ ಮಾತನಾಡಿದ್ದೆ. ಹಲವರು ನನ್ನ ಬೆನ್ನುತಟ್ಟಿದ್ದರು, ಕೆಲವರು ಟೀಕೆ ಸಹ ಮಾಡಿದ್ದರು. ಆದರೆ ಇದು ಒನ್ ಡೇ ಮ್ಯಾಚ್ ಅಲ್ಲ. ಡ್ರಗ್ಸ್ ವಿರುದ್ಧ ನಿರಂತರ ಕಾರ್ಯಾಚರಣೆ ಅಗತ್ಯವಾಗಿದ್ದು, ಈ ಹಿಂದೆ ಪೊಲೀಸರೆದುರು ವಿಚಾರಣೆಗೆ ಬಂದವರೆಲ್ಲ ಬೆಂಗಳೂರಿನಲ್ಲಿ ಈಗ ಮತ್ತೆ ಪಾರ್ಟಿ ಮಾಡುತ್ತಿದ್ದಾರೆ”.
ಕೊವಿಡ್ ಎರಡನೇ ಅಲೆ ನಂತರ ಮತ್ತೆ ಪಾರ್ಟಿ ಜಾಸ್ತಿಯಾಗಿದೆ. ಡ್ರಗ್ಸ್ ಸೇವನೆ ಜಾಸ್ತಿಯಾಗಿದೆ. ಆದ್ದರಿಂದಲೇ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಆಗಬಾರದು. ಪೊಲೀಸರು ಎಲ್ಲರನ್ನೂ ಸರಿಯಾಗಿ ವಿಚಾರಣೆ ಮಾಡಬೇಕು.
ಸಿಸಿಬಿ ಪೊಲೀಸರು ಬಂಧಿತರ ಹೆಸರನ್ನು ಹೇಳಿದ್ದರೂ ಏಕೆ ಟೆಸ್ಟ್ ಮಾಡಿಸಿಲ್ಲ ಎಂದು ಇಂದ್ರಜಿತ್ ಇದೇ ವೇಳೆ ಪ್ರಶ್ನಿಸಿದ್ದಾರೆ. ”ಸಿಸಿಬಿ ಪೊಲೀಸರಿಗೆ ನನ್ನ ಬಳಿ ಇದ್ದ ಎಲ್ಲ ಮಾಹಿತಿ ನೀಡಿದ್ದೆ. ಯೂರಿನ್, ಬ್ಲಡ್ ಸ್ಯಾಂಪಲ್ ಟೆಸ್ಟ್ ಮಾಡಿದರೆ ಸಾಕಾಗುವುದಿಲ್ಲ. ಕೂದಲ ಸ್ಯಾಂಪಲ್ ಟೆಸ್ಟ್ ಮಾಡಬೇಕು ಎಂದು ಹೇಳಿದ್ದೆ. ಆದರೆ ಕೆಲವರಿಗೆ ಬೆಣ್ಣೆ, ಕೆಲವರಿಗೆ ಸುಣ್ಣ ಎಂಬಂತೆ ಟೆಸ್ಟ್ ಮಾಡಿದ್ದಾರೆ. ಸಿಸಿಬಿಯವರಿಗೆ ರಾಜಕೀಯ ಒತ್ತಡವಿತ್ತೇ? ಸ್ಟೇಟ್‌ಮೆಂಟ್‌ನಲ್ಲಿ ಆರೋಪ ಪ್ರೂವ್ ಮಾಡಲು ಸಾಧ್ಯವಿಲ್ಲ ಎಂದು ಇಂದ್ರಜಿತ್ ಸಿಸಿಬಿ ಪೊಲೀಸರ ತನಿಖಾ ನಡೆಯ ವಿರುದ್ಧ ಆರೋಪ ಮಾಡಿದ್ದಾರೆ.
”ಕಿಶೋರ್ ಶೆಟ್ಟಿ ಹೇಳಿಕೆ ಕೊಟ್ಟ ತಕ್ಷಣ ತನಿಖೆ ಮಾಡಬೇಕಾಗಿತ್ತು. ಆದರೆ ಮಾಡಿಲ್ಲ. ಆದ್ದರಿಂದಲೇ ನ್ಯಾಯಾಲಯದಲ್ಲಿ ಪ್ರಕರಣಗಳು ಫೇಲ್ ಆಗೋದು. ಗೌರಿ ಹತ್ಯೆ ಆಗಿ 4 ವರ್ಷ ಆಗಿದೆ. ಆದರೆ ಇನ್ನೂ ಕೋರ್ಟ್ನಲ್ಲಿ ಟ್ರಯಲ್ ಆಗಿಲ್ಲ. ಇದನ್ನೆಲ್ಲ ನೋಡಿದಾಗ ವ್ಯವಸ್ಥೆ ಬಗ್ಗೆ ಬೇಸರವಾಗತ್ತದೆ. ಕೋರ್ಟ್ನಲ್ಲಿ ವಿಚಾರ ಇರೋದರಿಂದ ನಾನು ಮಾತನಾಡಲು ಸಾಧ್ಯವಿಲ್ಲ” ಎಂದು ಇಂದ್ರಜಿತ್ ಬೇಸರ ಹೊರಹಾಕಿದ್ದಾರೆ.