ಬೆಂಗಳೂರು: ವಿಜಯಪುರ ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಶನಿವಾರ ರಾತ್ರಿ ಕೇಳಿ ಬಂದಿರುವ ದೊಡ್ಡ ಶಬ್ದದ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ವರದಿ ನೀಡಲು ಭೂರ್ಗರ್ಭ ಶಾಸ್ತ್ರಜ್ಞರಿಗೆ ಸೂಚಿಸಲಾಗಿದೆ. ಅಲ್ಲದೆ ರಾಜ್ಯದ ವಿಪತ್ತು ನಿರ್ವಹಣಾ ಘಟಕಕ್ಕೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಬೆಂಗಳೂರಿನಿಂದ ವಿಪತ್ತು ನಿರ್ವಹಣಾ ತಂಡ ವಿಜಯಪುರಕ್ಕೆ ಆಗಮಿಸಲಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶನಿವಾರ ರಾತ್ರಿ 11.47 ಗಂಟೆಯ ಸುಮಾರಿಗೆ ವಿಜಯಪುರ ನಗರ, ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ, ತಾಳಿಕೋಟೆ, ಮುದ್ದೇಬಿಹಾಳ ತಾಲೂಕಿನ ಹಲವು ಕಡೆಗಳಲ್ಲಿ ಭೂಕಂಪನ ಮಾದರಿಯಲ್ಲಿ ದೊಡ್ಡ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಭಯಭೀತರಾದ ಜನರು ರಾತ್ರಿ ಮನೆಯ ಹೊರಗೆ ಬಂದು ಕುಳಿತಿರುವ ಬಗ್ಗೆ ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಕ್ಷಣ ದೂರವಾಣಿ ಕರೆ ಮಾಡಿ ಚರ್ಚಿಸಿದ್ದು, ಯಾವುದೇ ರೀತಿಯ ಪ್ರಾಣ ಹಾನಿಯಾಗದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ದೊಡ್ಡ ಶಬ್ದದಿಂದ ಜನರು ಭಯಭೀತರಾಗುವುದು ಬೇಡ ಸರ್ಕಾರ ಈಗಾಗಲೇ ಜಿಲ್ಲಾಡಳಿತ ಹಾಗೂ ಎಲ್ಲ ತಾಲೂಕು ಅಧಿಕಾರಿಗಳಿಗೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರು ಯಾವುದೇ ರೀತಿಯ ಆತಂಕ ಪಡುವುದು ಬೇಡ. ಸರ್ಕಾರ ಹಾಗೂ ಜಿಲ್ಲಾಡಳಿತ ಜನರ ರಕ್ಷಣೆಗೆ ಸರ್ವ ಸನ್ನದ್ದವಾಗಿದೆ ಎಂದು ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.
Laxmi News 24×7