ಗಾಂಧಿನಗರ: ವೈದ್ಯ, ಕೊರೊನಾ ವಾರಿಯರ್ಸ್ ಬಳಿಕ ಇದೀಗ ಸೂರತ್ ಮೂಲದ ವ್ಯಕ್ತಿಯೊಬ್ಬರು ಕೊರೊನಾ ಕಿಲ್ಲರ್ ಗಣೇಶನ ಮೂರ್ತಿ ತಯಾರಿಸಿದ್ದಾರೆ.ಹೌದು. ಕೊರೊನಾ ಮಹಾಮಾರಿಯಿಂದ ಈ ಬಾರಿ ಎಲ್ಲಾ ಹಬ್ಬಗಳು ತುಂಬಾನೆ ಆಚರಿಸಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದ್ದು, ಪ್ರತಿ ಬಾರಿಯೂ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಚೀನಿ ವೈರಸ್ ಕಾಟದಿಂದ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸುವ ಸಾಧ್ಯತೆ ಇದೆ.
ಇತ್ತ ಗಣೇಶನ ಮೂರ್ತಿ ತಯಾರಕರು ಕೂಡ ಈ ಬಾರಿ ಕೊರೊನಾ ಕಿಲ್ಲರ್, ಕೊರೊನಾ ವಾರಿಯರ್ ಎಂಬಂತಹ ಥೀಮ್ ಇಟ್ಟುಕೊಂಡು ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಮಹಾಮಾರಿಯನ್ನು ಹೊಡೆದೊಡಿಸುವಂತಹ ನಿಟ್ಟಿನಲ್ಲಿ ಗಣೇಶನನ್ನು ರೂಪಿಸಲಾಗುತ್ತಿದೆ.
ಸೂರತ್ ಮೂಲದ ಆಶೀಶ್ ಪಟೇಲ್ ಕೂಡ ಇಂತದ್ದೇ ಮೂರ್ತಿಯನ್ನು ತಯಾರಿಸಿದ್ದಾರೆ. ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿರುವ ಆಶೀಶ್, ಈ ಮೂರ್ತಿಯ ಮೂಲಕ ನಾನು ಸಮಾಜಕ್ಕೆ ಒಂದು ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದೇನೆ. ಅದೇನೆಂದರೆ ಜನ ಕೋವಿಡ್ 19 ವಿರುದ್ಧ ಆದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮೆಸೇಜ್ ನೀಡುವ ಸಲುವಾಗಿ ಕೊರೊನಾ ಕಿಲ್ಲರ್ ಗಣೇಶನನ್ನು ಈ ಬಾರಿ ತಯಾರಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಬೆಂಗಳೂರಿನ ಕಲಾವಿದರೊಬ್ಬರು ಕೂಡ ಗಣೇಶನನ್ನು ಆರೋಗ್ಯ ರಕ್ಷಕನನ್ನಾಗಿ ಮಾಡಿದ್ದರು. ಗಣೇಶನನ್ನು ವೈದ್ಯ ಹಾಗೂ ಆತನ ವಾಹನ ಇಲಿಯನ್ನು ದಾದಿಯಂತೆ ಮೂರ್ತಿ ತಯಾರಿಸಿದ್ದರು. ಆ ಬಳಿಕ ಕೊಯಂಬತ್ತೂರು ಮೂಲದ ಕಲಾವಿದರೊಬ್ಬರು ಗಣೇಶನನ್ನು ಕೊರೊನಾ ವಾರಿಯರ್ ಆಗಿ ರೂಪಿಸಿದ್ದಾರೆ. ಗಣೇಶ ಬಂದು ಕೊರೊನಾವನ್ನು ಹೊಡೆದು ಸಾಯಿಸುವಂತೆ ಮೂರ್ತಿಯನ್ನು ತಯಾರಿಸಿದ್ದರು.