ಚಾಮರಾಜನಗರ: ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ಗಲ್ಲಿಗೇರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.
–
ಮಲೆಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು. ಇಂತಹವನ್ನು ಯಾವುದೇ ಪರಿಸ್ಥಿತಿಯಲ್ಲಿ ಸಹಿಸಬಾರದು. ನ್ಯಾಯಂಗ ವ್ಯವಸ್ಥೆಯಲ್ಲಿ ಸಹ ಶೀಘ್ರ ನ್ಯಾಯ ನೀಡುವಂತಾಗಬೇಕು. ಹತ್ತಾರು ವರ್ಷಗಳ ಕಾಲ ಮುಂದೂಡಿದರೆ ಸಾಕ್ಷ್ಯ ನಾಶ, ಬೆದರಿಕೆ ಹಾಕುವ ಕೃತ್ಯ ನಡೆಸುತ್ತಾರೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡಬಾರದು, ಕಾಲ ಮಿತಿಯಲ್ಲಿ ಪ್ರಕರಣ ಇತ್ಯರ್ಥಪಡಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಆಗ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಆರೋಪಿಗಳು ಪರಾರಿಯಾಗಲು ಯತ್ನಿಸಿದರೆ ಎನ್‍ಕೌಂಟರ್ ಮಾಡಬೇಕು. ದುಷ್ಟ ಶಕ್ತಿಗಳಿಗೆ ಇಂತಹ ಶಿಕ್ಷೆಗಳು ಅನಿವಾರ್ಯ. ವಿಶೇಷ ಕೋರ್ಟ್ ರಚನೆ ಮಾಡಿ ಶೀಘ್ರವೇ ದುಷ್ಟರಿಗೆ ಕಠಿಣ ಶಿಕ್ಷೆಯಾಗಬೇಕು, 6 ತಿಂಗಳಲ್ಲಿ ನಿರ್ಣಯವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಡೆಯಬಾರದ ಘಟನೆ ನಡೆದಿದೆ. ಗೃಹ ಸಚಿವರು ಇಂದು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಅವರು ಪ್ರಾಮಾಣಿಕರಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುಲ್ಲಿ, ಅತ್ಯಾಚಾರ, ದೌರ್ಜನ್ಯ ನಿಗ್ರಹ ಮಾಡಲು ಅವರು ಸಮರ್ಥರಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.