ಪಣಜಿ : ರಾಜ್ಯದಲ್ಲಿ ಗಣಿಗಾರಿಕೆಯನ್ನು ಮುಂದಿನ ಮೂರು ತಿಂಗಳಲ್ಲಿ ಗೋವಾ ಸರ್ಕಾರಿ ಖನಿಜ ಅಭಿವೃದ್ಧಿ ನಿಗಮದ ಅಡಿಯಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ.
ಇಂದು(ಶುಕ್ರವಾರ, ಆಗಸ್ಟ್ 20) ದಕ್ಷಿಣ ಗೋವಾದ ಧಾರಬಾಂದೋರಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಸಾವಂತ್, ಹೊಸದಾಗಿ ರಚನೆಯಾದ ಗೋವಾ ಖನಿಜ ಅಭಿವೃದ್ಧಿ ನಿಗಮದ ಅಡಿಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಈಗಾಗಲೇ ಹರಾಜು ಮಾಡಿದ ಕಬ್ಬಿಣದ ಅದಿರು ಸಾಗಾಟದಂತಹ ಚಟುವಟಿಕೆಯನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದ್ದರಿಂದ ರಾಜ್ಯದಲ್ಲಿ ಅದಿರು ವ್ಯವಹಾರ ಉದ್ಯೋಗದಲ್ಲಿ ತೊಡಗಿಕೊಂಡವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ನಾನು ಕೂಡ ಗಣಿಗಾರಿಕೆ ನಡೆಯುವ ಪರಿಸರದಲ್ಲಿಯೇ ವಾಸಿಸುತ್ತಿದ್ದೇನೆ. ರಾಜ್ಯದಲ್ಲಿ ಗಣಿಗಾರಿಕೆ ಪುನರಾರಂಭಿಸಲು ಸರ್ಕಾರ ಹೆಚ್ಚಿನ ಪ್ರಯತ್ನ ನಡೆಸುತ್ತಿದೆ. ಆದರೆ ಈ ಪ್ರಕರಣ ಸುಪ್ರಿಂ ಕೋರ್ಟನಲ್ಲಿದೆ ಎಂದಿದ್ದಾರೆ.