ಬೆಂಗಳೂರು,ಆ.12- ಸಚಿವರು ಮತ್ತು ಶಾಸಕರ ಬ್ಲಾಕ್‍ಮೇಲ್‍ಗಳಿಗೆ ಯಾವುದೇ ಕಾರಣಕ್ಕೂ ಜಗ್ಗಬಾರದು. ಎಂಥದೇ ಪರಿಸ್ಥಿತಿ ಎದುರಾದರೂ ನಾವು ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಯ ನೀಡಿದ್ದಾರೆ. ಉಳಿದಿರುವ ಅವಧಿಯಲ್ಲಿ ಆಡಳಿತದ ಕಡೆ ಹೆಚ್ಚು ಗಮನಹರಿಸಿ ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಬೇಕು. 2023ರ ಚುನಾವಣೆಯಲ್ಲಿ ಪಕ್ಷವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಶ್ರಮಿಸಬೇಕೆಂದು ಸೂಚಿಸಿದ್ದಾರೆ.
ನಿರೀಕ್ಷಿತ ಖಾತೆ ಸಿಗದೆ ಅಸಮಾಧಾನಗೊಂಡು ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್ ಪ್ರಕರಣದಿಂದ ತುಸು ಸಿಡಿಮಿಡಿಗೊಂಡಿರುವ ವರಿಷ್ಠರು ಮುಂದೆ ಇಂತಹ ಬ್ಲಾಕ್‍ಮೇಲ್‍ಗಳಿಗೆ ಯಾವುದೇ ಕಾರಣಕ್ಕೂ ಮಣಿಯಬೇಡಿ. ಒಂದು ವೇಳೆ ನೀವು ನೀಡಿರುವ ಖಾತೆಯನ್ನು ಒಪ್ಪಿಕೊಳ್ಳದೆ ರಾಜೀನಾಮೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದರೆ ಮುಲಾಜಿಲ್ಲದೆ ತೆಗೆದುಕೊಳ್ಳಬಹುದೆಂದು ಸಲಹೆ ಮಾಡಿದ್ದಾರೆ.
ಒಬ್ಬ ಆನಂದ್ ಸಿಂಗ್‍ಗೆ ಮಣಿದರೆ ನಾಳೆ ಇದೇ ರೀತಿ ಸಚಿವರು ಮತ್ತು ಶಾಸಕರು ಪಕ್ಷವನ್ನೇ ಬ್ಲಾಕ್‍ಮೇಲ್ ಮಾಡುವ ಹಂತಕ್ಕೆ ಬರುತ್ತಾರೆ. ಖಾತೆಗಳ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಇದನ್ನು ಒಪ್ಪಿಕೊಳ್ಳುವುದು ಪ್ರತಿಯೊಬ್ಬ ಸಚಿವರ ಕರ್ತವ್ಯ. ನನಗೆ ಇಂಥದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಯಾರಾದರೂ ರಾಜೀನಾಮೆ ಕೊಡುತ್ತೇನೆ ಎಂದರೆ ಅವರ ಮನವೊಲಿಸದೆ ರಾಜೀನಾಮೆಯನ್ನು ಸ್ವೀಕರಿಸಿ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸಚಿವರ ಖಾತೆಗಳನ್ನು ಬದಲಾವಣೆ ಮಾಡಲೇಬಾರದು. ಅಸಮಾಧಾನವಿದ್ದರೆ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿಗಳ ಜೊತೆ ಮಾತುಕತೆ ನಡೆಸಲಿ. ಪ್ರತಿಯೊಂದಕ್ಕೂ ರಾಜೀನಾಮೆ ಕೊಡುತ್ತೇನೆ ಎಂದು ಬೆದರಿಕೆ ಹಾಕಿದರೆ ಸಹಿಸಲು ಸಾಧ್ಯವಿಲ್ಲ ಎಂದು ವರಿಷ್ಠರು ಗುಡುಗಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ವರಿಷ್ಠರು, ಸಚಿವರು ಮತ್ತು ಶಾಸಕರು ದೆಹಲಿಗೆ ಬರಬೇಕಾದ ಅಗತ್ಯವಿಲ್ಲ.
ಹಾಗೊಂದು ವೇಳೆ ಅಸಮಾಧಾನವಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಲಿ. ನಾವು ಬ್ಲಾಕ್‍ಮೇಲ್‍ಗೆ ಜಗ್ಗುವುದೂ ಇಲ್ಲ. ಬಗ್ಗುವುದು ಇಲ್ಲ. ಸರ್ಕಾರಕ್ಕಿಂತ ನಮಗೆ ಪಕ್ಷದ ಹಿತ ಮುಖ್ಯ ಎಂದು ಹೇಳಿದ್ದಾರೆ.
ದೆಹಲಿಯಲ್ಲಿರುವ ಯಾರೊಬ್ಬರನ್ನು ಸಹ ನಾವು ಭೇಟಿ ಮಾಡುವುದಿಲ್ಲ. ಅವರು ತಮ್ಮ ವೈಯಕ್ತಿಕ ಕೆಲಸಗಳಿಗೆ ಬಂದಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಸಚಿವ ಸ್ಥಾನಕ್ಕೆ ಇಲ್ಲವೇ ಪ್ರಬಲ ಖಾತೆಯನ್ನು ಕೇಳಿದರೆ ಅದನ್ನು ಕೇಳುವ ವ್ಯವದಾನ ನಮಗಿಲ್ಲ ಎಂದು ಕಡ್ಡಿ ಮುರಿದಂತೆ ಭಿನ್ನಮತೀಯರಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸಚಿವರಾದ ಎಂಟಿಬಿ ನಾಗರಾಜ್ ಸೇರಿದಂತೆ ಮತ್ತಿತರರು ತಮಗೆ ಖಾತೆ ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.