ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ನಿವೇಶನಗಳನ್ನು ವಾಪಸ್ ಪಡೆಯಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಮುಡಾ ಆಯುಕ್ತ ರಘುನಂದನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಹಾಂ, ‘ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464 ರಲ್ಲಿ 2001ರಲ್ಲಿಯೇ ಮುಡಾ ನಿವೇಶನಗಳನ್ನು ರಚಿಸಿ, ನಂತರದಲ್ಲಿ 19 ಫಲಾನುಭವಿಗಳಿಗೆ ಹಂಚಿದೆ.
2004ರಲ್ಲಿ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅದೇ ಜಮೀನನ್ನು ಖರೀದಿಸಿದ್ದಾರೆ. ಆ ಖರೀದಿಯೇ ಅಕ್ರಮವಾಗಿರುವುದರಿಂದ, ಅವರಿಗೆ ಬದಲಿ ನಿವೇಶನ ನೀಡಲು ಅವಕಾಶವೇ ಇಲ್ಲ. ಹೀಗಾಗಿ ಮುಡಾದಿಂದ ಹಂಚಿಕೆಯಾಗಿರುವ ನಿವೇಶನಗಳನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.
‘ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ನೀಡುವ ಸಂಬಂಧ ನಡೆದಿದ್ದ ಮುಡಾ ಸಭೆಯಲ್ಲಿ ಅಂದಿನ ಶಾಸಕ ಡಾ. ಯತೀಂದ್ರ ಅವರೂ ಇದ್ದರು’ ಎಂದರು.