ಶಿವಮೊಗ್ಗ: ಮೊದಲು ಪೊಲೀಸರು ಅಂದ್ರೆ ಜನರಿಗೆ ಭಯ ಇರುತಿತ್ತು. ಆದರೆ ಇತ್ತೀಚೆಗೆ ಜನರಿಗೆ ಪೊಲೀಸರ ಕಂಡರೆ ಭಯವೇ ಇಲ್ಲದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿಯವರೆಗೆ ಹಾಫ್ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಇಂದು ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಸಿಪಿಐ ಹಾಗೂ ಸಿಪಿಐ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಚಿವರು ಕೊರೊನಾ ತಡೆಗಟ್ಟುವಲ್ಲಿ ವಾರಿಯರ್ ರೀತಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು. ಆದರೆ ಇದೀಗ ಕೊರೊನಾ ಸೋಂಕು ಹೆಚ್ಚುತ್ತಿರುವ ಪರಿಣಾಮ ಪೊಲೀಸರು ಮತ್ತಷ್ಟು ಶ್ರಮ ಹಾಕಬೇಕಿದೆ ಎಂದರು.
ಇನ್ನು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಜಿಲ್ಲಾಡಳಿತ ಇಂದಿನಿಂದ ಜಿಲ್ಲೆಯಾದ್ಯಂತ ಹಾಫ್ ಲಾಕ್ ಡೌನ್ ಜಾರಿಗೊಳಿಸಿದೆ. ಮುಂಜಾನೆ 5 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2 ರ ನಂತರ ಹಾಗೂ ಮುಂಜಾನೆ 5 ರವರೆಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ. ಜನರು ಗುಂಪು ಗುಂಪಾಗಿ ಸೇರದೇ, ಲಾಕ್ ಡೌನ್ ವೇಳೆ ಜನರು ವಿನಃ ಕಾರಣ ಮನೆಯಿಂದ ಹೊರಗೆ ಬರದಂತೆ ಪೊಲೀಸರು ಜಾಗೃತಿ ಮೂಡಿಸುವ ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚನೆ ನೀಡಿದ್ದಾರೆ.