ಹರ್ಷಾ ಹೊಟೇಲ್ ಮಾಲೀಕ ಸುರೇಶ ನಾಯಿರಿ ನಿಧನ
ಬೆಳಗಾವಿ: ನಗರದ ಪ್ರತಿಷ್ಠಿತ ಹರ್ಷಾ ಹೊಟೇಲ್, ಶಬರಿ ಹೊಟೇಲ್ ಮಾಲೀಕರಾದ, ರಾಮತೀರ್ಥನಗರ ನಿವಾಸಿ ಮೂಲತಃ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಸುರೇಶ ಗಣಪಯ್ಯ ನಾಯಿರಿ(52) ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಸುರೇಶ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಅಂತ್ಯಕ್ರಿಯೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ನ. 14ರಂದು ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸುರೇಶ ನಾಯಿರಿ ಅವರು 1971ರಲ್ಲಿ ಜನಿಸಿದ್ದು, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿ,1987ರಲ್ಲಿ ಅಣ್ಣನೊಂದಿಗೆ ಬೆಳಗಾವಿಯಲ್ಲಿ ಪಾನ್ ಅಂಗಡಿ ಹಾಗೂ ಟೀ ಸ್ಟಾಲಿನಲ್ಲಿ ಕೆಲಸ ಆರಂಭಿಸಿದರು. ನಾಲ್ಕೈದು ವರ್ಷಗಳ ಉದ್ಯಮದ ಅನುಭವದೊಂದಿಗೆ 1991ರಲ್ಲಿ ಸ್ವಂತ ಉದ್ಯಮವನ್ನು ಕೆಎಲ್ ಇ ಆಸ್ಪತ್ರೆಯ ಹತ್ತಿರ ಪ್ರಾರಂಭಿಸಿದರು.
ಆಟೋ ನಗರದಲ್ಲಿ 2001ರಲ್ಲಿ ಹರ್ಷಾ ಫ್ಯಾಮಿಲಿ ರೆಸ್ಟೊರೆಂಟ್, ರಾಮದೇವ ಹೊಟೇಲ್ ಪಕ್ಕದಲ್ಲಿ 2013ರಲ್ಲಿ ಶಬರಿ ಹೊಟೇಲ್, ಶಿವಬಸವ ನಗರದ ಕೆಪಿಟಿಸಿಎಲ್ ಸಭಾಭವನ ಎದುರು 2019ರಲ್ಲಿ ಶ್ರೀ ಸಾಯಿ ಶಬರಿ ಹೊಟೇಲ್ ಆರಂಭಿಸಿದರು. ಮೇ 25ರಂದು ಆಟೋ ನಗರದ ಮೊದಲಿನ ಹರ್ಷಾ ಹೊಟೇಲ್ ಅನ್ನು ಅತ್ಯಾಧುನಿಕ ಸೌಲಭ್ಯವುಳ್ಳ, ಹೊಸ ವಿನ್ಯಾಸದೊಂದಿಗೆ ಲೋಕಾರ್ಪಣೆಯಾಗಿದೆ. ಗುರು ವಿವೇಕಾನಂದ ಸೊಸೈಟಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅನೇಕ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.