ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಎಷ್ಟು ಖಾಲಿ ಇದೆ ಎಂಬ ಮಾಹಿತಿಯನ್ನು ನೀವು ಮೊಬೈಲ್‌ನಲ್ಲೇ ತಿಳಿಯಬಹುದು.
ಕೋವಿಡ್ 19 ನಿಂದಾಗಿ ಈಗ ಇತರ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಬಿಬಿಎಂಪಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಖಾಲಿ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಸಲು ಮುಂದಾಗಿದೆ.
ಈ ಸಂಬಂಧ ಬಿಬಿಎಂಎಂಪಿಯ ಕೋವಿಡ್ 19 ವೆಬ್‌ಸೈಟ್‌ನಲ್ಲೇ ಡ್ಯಾಶ್‌ಬೋರ್ಡ್ ಆರಂಭಿಸಿದ್ದು, ಇದರಲ್ಲಿ ಭರ್ತಿ ಎಷ್ಟು ಆಗಿದೆ? ಖಾಲಿ ಎಷ್ಟಿದೆ ಎಂಬ ರಿಯಲ್ ಟೈಂ ಮಾಹಿತಿಯನ್ನು ನೋಡಬಹುದು.
ಏನು ಮಾಹಿತಿ ಇದೆ?
ಯಾವ ಆಸ್ಪತ್ರೆಯಲ್ಲಿ ಎಷ್ಟು ಜನರಲ್, ಎಚ್‌ಡಿಯು(ಹೈ ಡಿಪೆಂಡೆನ್ಸಿ ಯೂನಿಟ್) ಐಸಿಯು, ಐಸಿಯು+ವೆಂಟಿಲೇಟರ್ ಬೆಡ್ ಮೀಸಲಿಡಲಾಗಿದೆ ಎಂಬ ಮಾಹಿತಿಯನ್ನು ನೋಡಬಹುದು. ಒಟ್ಟು ಮಾಹಿತಿ ಅಲ್ಲದೇ ಡ್ಯಾಶ್‌ಬೋರ್ಡ್ ಕೆಳಗಡೆ ಆಸ್ಪತ್ರೆಗಳ ವಿವರ ಇದ್ದು, ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇದೆ, ಎಷ್ಟು ಭರ್ತಿ ಆಗಿದೆ ಎಂಬ ವಿವರವನ್ನು ನೋಡಿ ಬೇಕಾದ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಬಹುದು.
ಎಷ್ಟು ಮೀಸಲಿಡಲಾಗಿದೆ?
ಕೋವಿಡ್ ರೋಗಿಗಳಿಗಾಗಿ 3,159 ಜನರಲ್, 2,097 ಎಚ್‌ಡಿಯು, 317 ಐಸಿಯು, 306 ಐಸಿಯು+ ವೆಂಟಿಲೇಟರ್ ಸೇರಿ ಒಟ್ಟು 5,879 ಬೆಡ್ ಮೀಸಲಿಡಲಾಗಿದೆ.
ಎಷ್ಟು ಭರ್ತಿಯಾಗಿದೆ?
ಮಂಗಳವಾರದವರೆಗೆ 962 ಜನರಲ್, 1,206 ಎಚ್‌ಡಿಯು, 67 ಐಸಿಯು, 122 ಐಸಿಯು+ವೆಂಟಿಲೇಟರ್ ಸೇರಿ 2,357 ಬೆಡ್ ಭರ್ತಿಯಾಗಿದೆ.
ಖಾಲಿ ಎಷ್ಟಿದೆ?
2,197 ಜನರಲ್, 891 ಎಚ್‌ಡಿಯು, 250 ಐಸಿಯು,184 ಐಸಿಯು+ ವೆಂಟಿಲೇಟರ್ 184 ಸೇರಿ ಒಟ್ಟು 3,522 ಬೆಡ್ ಖಾಲಿಯಿದೆ.
ಸೋಮವಾರ ಸರ್ಕಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ ಒಟ್ಟು ಬೆಂಗಳೂರು ನಗರದಲ್ಲಿ 19,702 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 15,052 ಸಕ್ರಿಯ ಪ್ರಕರಣಗಳಿದ್ದು, 4,328 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ಬೆಂಗಳೂರು ನಗರದಲ್ಲಿ 317 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ.
ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್ ಮಾಡಿ: www.chbms.bbmpgov.in/portal/reports/