ಕಾರವಾರ: ಕರಾವಳಿ ಭಾಗದ ಮೊದಲ ಕೋವಿಡ್-19 ಪ್ರಯೋಗಾಲಯವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಘಾಟನೆ ಮಾಡಿದರು.
ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಕರಾವಳಿ ಭಾಗದ ಮೊದಲ ಕೋವಿಡ್-19 ಪ್ರಯೋಗಾಲಯವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಇಂದು ಉದ್ಘಾಟಿಸಿದರು. ಇಷ್ಟು ದಿನ ಉತ್ತರ ಕನ್ನಡ ಜಿಲ್ಲೆಯಲ್ಲಿನ ಸೋಂಕಿತರ ಪರೀಕ್ಷೆಯನ್ನು ಶಿವಮೊಗ್ಗ ಅಥವಾ ಬೆಂಗಳೂರಿಗೆ ಕಳುಹಿಸಿ ವರದಿ ತರಿಸಬೇಕಿತ್ತು. ಇದು ತುಂಬಾ ತಡವಾಗುತ್ತಿತ್ತು. ಇದೀಗ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿಯೇ ಮಾಡಲು ಸುಸಜ್ಜಿತ ಪ್ರಯೋಗಾಲಯ ನಿರ್ಮಾಣವಾಗಿದ್ದು, ಇಂದಿನಿಂದ ಕಾರ್ಯ ನಿರ್ವಹಿಸಲಿದೆ.
ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ವಿವೇಚನೆಗೆ, ಅಧಿಕಾರಕ್ಕೂ ಮೀರಿದಾಗ ಅಪಾಯ ತರುತ್ತದೆ. ತಾಂತ್ರಜ್ಞಾನ ಬಳಸುವವರು ತಮ್ಮ ಮಿತಿಯನ್ನು ಅರಿತು ಬಳಸಬೇಕು ಎಂದು ವಾರ್ತಾ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಪಿ.ಮಣಿವಣ್ಣನ್ ವರ್ಗಾವಣೆ ಕುರಿತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಯಾವ ಕಾರಣಕ್ಕೆ ವರ್ಗಾವಣೆ ಮಾಡಿದ್ದಾರೆ ಎನ್ನುವುದು ತಿಳಿದಿಲ್ಲ. ಅವರು ಕಾರ್ಮಿಕರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕಾರ್ಮಿಕ ಇಲಾಖೆ ಕಾರ್ಮಿಕರು ಹಾಗೂ ಮಾಲೀಕರ ನಡುವಿನ ಸೇತುವೆಯಂತೆ ಕೆಲಸ ಮಾಡಬೇಕಾಗಿದೆ. ಕಾರ್ಮಿಕರ ಪರವಾಗಿ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಇಲಾಖೆಗೆ ಸಾಕಷ್ಟು ಅವಕಾಶ ಇದೆ. ಆದರೆ ಭವಿಷ್ಯದಲ್ಲಿ ಕಾರ್ಮಿಕರ ಸ್ಥಿತಿ ಏನು ಎನ್ನುವುದನ್ನು ಸಹ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೊರರಾಜ್ಯದಿಂದ ರಾಜ್ಯಕ್ಕೆ ಬರುತ್ತಿರುವ ಲಕ್ಷಕ್ಕೂ ಹೆಚ್ಚು ಜನರನ್ನು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಮಾಡಲಾಗುತ್ತದೆ. ಹಂತ ಹಂತವಾಗಿ ಅವರನ್ನು ರಾಜ್ಯಕ್ಕೆ ಕರೆಸಿಕೊಳ್ಳಲಾಗುತ್ತದೆ. ಯಾರನ್ನೂ ತಡೆಯುವುದಿಲ್ಲ. ಆದರೆ ಬಂದವರನ್ನೆಲ್ಲಾ ಕೊರಂಟೈನ್ ಮಾಡಲಾಗುತ್ತದೆ ಎಂದರು.
ಪ್ರಯೋಗಾಲಯ ಉದ್ಘಾಟನೆ