‘ಮಿಣಿ ಮಿಣಿ ಪೌಡರ್’ ಟ್ರೋಲ್ ಮಾಡಿದ್ದೇ ಬಿಜೆಪಿ ಕಾರ್ಯಕರ್ತರು: ಅಬ್ಬರಿಸಿ ಬೊಬ್ಬಿರಿದ ಎಚ್ಡಿಕೆ..!
ತಮ್ಮ ಮಿಣಿ ಮಿಣಿ ಪೌಡರ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿರೋದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರೇ ಟ್ರೋಲ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿ, ಅದು ಬಾಂಬ್ ಅಲ್ಲ ಕೇವಲ ಮಿಣಿ ಮಿಣಿ ಪೌಡರ್ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬಿಜೆಪಿ ಕಾರ್ಯಕರ್ತರು ವಿಕೃತ ಮನೋಭಾವದಿಂದ ಟ್ರೋಲ್ ಮಾಡಿದ್ದಾರೆ ಎಂದು ಕಿಡಿಕಾರಿದ ಕುಮಾರಸ್ವಾಮಿ, ಅದು ಅವರ ವಿಕೃತ ಮನೋಭಾವ ಎಂದರು.
ಬಿಜೆಪಿ ಕಾರ್ಯಕರ್ತರಲ್ಲಿರುವ ಅಸಹ್ಯಕರವಾದ ಆಲೋಚನೆಗಳು ಈ ಮೂಲಕ ವ್ಯಕ್ತವಾಗುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶವ್ಯಕ್ತಪಡಿಸಿದರು. ಪತ್ರಿಕೆಯಲ್ಲಿ ವರದಿಯಾಗಿದ್ದ ವಿಚಾರವನ್ನು ಪ್ರಸ್ತಾಪಿಸಿ ನಾನು ಮಿಣಿಮಿಣಿ ಪೌಡರ್ ಹೇಳಿಕೆ ನೀಡಿದ್ದೇನೆ. ನಾನು ನನ್ನ ಜೀವನದಲ್ಲಿ ತಪ್ಪು ಮಾಡಿಲ್ಲ, ತಪ್ಪು ಮಾಡಿದ್ದರೆ ಓಪನ್ ಆಗಿ ಹೇಳೋನು ನಾನು ಎಂದು ಸವಾಲೆಸೆದ ಎಚ್ಡಿಕೆ, ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡ್ತಿದ್ದಾರೆ, ನನ್ನ ಬಗ್ಗೆ ಕೀಳಾಗಿ ವೈರಲ್ ಮಾಡ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇವೆಲ್ಲವೂ ಬಿಜೆಪಿ ಸಂಸ್ಕೃತಿ ಎಂದ ಕುಮಾರಸ್ವಾಮಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿರುವುದು ಬಿಜೆಪಿ ಅಭಿಮಾನಿಗಳೇ ಎಂದು ಹೇಳಿದರು.
ನಾನು ಏನು ಅಂತಾ ಜನ ನೋಡಿದ್ದಾರೆ. ನನ್ನ ಜೀವನ, ನಡವಳಿಕೆ ಪ್ರತಿಯೊಬ್ಬರಿಗೂ ಗೊತ್ತಿದೆ ಎಂದ ಕುಮಾರಸ್ವಾಮಿ, ಇವರೇನು ನನಗೆ ಸರ್ಟಿಫಿಕೇಟ್ ಕೊಡೋದು, ನನಗ್ಯಾಕೆ ಬೇಕು ಇವರ ಸರ್ಟಿಫಿಕೇಟ್ ಎಂದು ಪ್ರಶ್ನಿಸಿದರು. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಹೇಳಿಕೆ ಕೊಟ್ಟಿಲ್ಲ ಎಂದ ಎಚ್ಡಿಕೆ,
ಕೆಲವು ಹಿರಿಯ ಅಧಿಕಾರಿಗಳೇ ಬಾಂಬ್ ಸಂಬಂಧ ನೀಡಿದ್ದಾರೆ. ಬಂಧಿತ ಆರೋಪಿಯೇ ಅದರಲ್ಲಿ ಸಲ್ಫರ್ ಪೌಡರ್ ಇತ್ತು ಎಂದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರು. ಹುಡುಗಾಟಿಕೆಗೆ ಸರ್ಕಾರ ನಡೆಸಬಾರದು ಎಂದು ಕಿವಿಮಾತು ಹೇಳಿದ ಕುಮಾರಸ್ವಾಮಿ, ದೊಡ್ಡ ಕಂಟೈನರ್‌ನಲ್ಲಿ ಬಾಂಬ್ ಇದೆ, ಸ್ಫೋಟವಾದ್ರೆ ಸಾವಿರಾರು ಜನ ಸಾಯ್ತಾರೆ ಅಂತೆಲ್ಲಾ ಹೇಳಿದ್ರು. ಅದೆಲ್ಲಾ ಬೇಕಿತ್ತ ಇವರಿಗೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಒಂದು ಸಮಾಜದ ಬಗ್ಗೆ ದೋಷ ಹುಡುಕಬೇಕೆಂಬುದು ಅವರ ಮನಸ್ಸಿನಲ್ಲಿತ್ತು. ಈಗ ಎಕ್ಸ್ ಪೋಸ್ ಆಗಿದ್ದಾರೆ, ಆದ್ರೆ ಅದನ್ನ ಮುಚ್ಚಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಕಥೆ ಕಟ್ಟಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿ ಕಾರಿದರು.