ಕೋಲಾರ: ಕೊರೊನಾ ವಿರುದ್ಧ ಹೋರಾಡುತ್ತಿರುವ ಸುಮಾರು 5 ಸಾವಿರ ಜನ ವಾರಿಯರ್ಸ್‍ಗೆ ದಿನಸಿ ಕಿಟ್ ಜೊತೆಗೆ ಮಡಿಲು ತುಂಬಿ ಗೌರವಿಸುವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಮಾಲೂರು ಶಾಸಕ ನಂಜೇಗೌಡ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಗಲಿರುಳು ದುಡಿಯುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಿಸಿದರು. ಅಲ್ಲದೆ ಶಾಸಕರ ಕುಟುಂಬಸ್ಥರು ಅರಿಶಿನ ಕುಂಕುಮ ನೀಡಿ ಮಡಿಲು ತುಂಬಿದರು.
ಮಾಲೂರು ತಾಲೂಕಿನ 5 ಸಾವಿರ ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ನೌಕರರು, ಪೌರಕಾರ್ಮಿಕರರಿಗೆ ಗೌರವ ಸಲ್ಲಿಸಲಾಯಿತು. ಬಂದಿದ್ದ ಮಹಿಳೆಯರಿಗೆ ಸೀರೆ, ಅರಿಶಿನ-ಕುಂಕುಮ ಜೊತೆಗೆ ಆಹಾರ ಕಿಟ್‍ನ್ನು ನೀಡಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ಒಂದು ಎಕರೆಗೆ ಒಂದು ಬಾರಿ ಔಷಧ ಹೊಡೆಯಲು ಸಾಕಾಗುವುದಿಲ್ಲ. ಸಂಪ್ರದಾಯ ವೃತ್ತಿ ಮಾಡುವವರ ಸಭೆ ಕರೆಸಿದ್ದು ಎಲ್ಲ ಕರ ಕುಶಲ ಕಾರ್ಮಿಕರೊಂದಿಗೆ ಸಭೆ ಮಾಡಿ ಅಭಿಪ್ರಾಯ ಪಡೆದುಕೊಂಡಿದ್ದೆ. ಅದರಂತೆ ಸವಿತ ಸಮಾಜ, ಅಟೋ, ಟ್ಯಾಕ್ಸಿ, ಮಡಿವಾಳ ಸಮಾಜ, ನೇಕಾರರಿಗೆ 5 ಸಾವಿರ ಕೊಡುವುದು ಸರಿ. ಆದರೆ ಸಾಕಷ್ಟು ಜನರನ್ನು ಪ್ಯಾಕೇಜ್ ನಿಂದ ಕೈ ಬಿಟ್ಟಿದ್ದಾರೆ, ಅವರಿಗೂ ಕೂಡ ಆರ್ಥಿಕ ಸಹಾಯ ಮಾಡಬೇಕೆಂದು ಆಗ್ರಹಿಸಿದರು.
ಮಾಲೂರು ಶಾಸಕ ನಂಜೇಗೌಡ ಮಾತನಾಡಿ, ನಮ್ಮ ಕುಟುಂಬ ವರ್ಗದವರೆಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ 5 ಸಾವಿರ ಮಂದಿಗೆ ಮಾಜಿ ಸಿಎಂ ಸಿದ್ದು ಅವರಿಂದ ಸೀರೆ, ಅರಿಶಿನ-ಕುಂಕುಮ, ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನ ಕರೆಸಿ ತಾಲೂಕಿನ 56 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಮಾಡಿದ್ದೆವು. ಮುಂದೆಯೂ ತಾಲೂಕಿನಲ್ಲಿ ಇದೆ ರೀತಿ ಸೇವೆ ಮುಂದುವರೆಯಲಿದೆ ಎಂದರು.
3 ಗಂಟೆ ಸುಮಾರಿಗೆ ಅನೇಕಲ್ ಸೇರಿದಂತೆ ಜಿಲ್ಲೆಯ ಹಲವೆಡೆ ನಷ್ಟಕ್ಕೊಳಗಾದ ಬೆಳೆಗಳನ್ನು ವೀಕ್ಷಣೆ ಮಾಡಿ ಕೊಮ್ಮನಹಳ್ಳಿಗೆ ಆಗಮಿಸಿದ್ದರು. ಕೊಮ್ಮನಹಳ್ಳಿ ಚನ್ನಬೈರವೇಶ್ವರ ದೇವಾಲಯದಲ್ಲಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಹೋರಗಿನಿಂದಲೇ ಕೈ ಮುಗಿದು ಸಿದ್ದರಾಮಯ್ಯ ವಾಪಸ್ ಆದರು. ಇದೆ ವೇಳೆ ಶಾಸಕ ಬೈರತಿ ಸುರೇಶ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ವಿ.ಆರ್.ಸುದರ್ಶನ್ ಕೂಡ ದೇವಸ್ಥಾನದ ಮುಂಭಾಗದಲ್ಲಿ ಕೈ ಮುಗಿದು ವಾಪಸ್ ಆದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಡವಟ್ಟು ಮಾಡಿದ್ದಾರೆ.