ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸಲೂನ್ ಒಂದರಲ್ಲಿ ಕೊರೊನಾ ಸೋಂಕಿತ ಕಟಿಂಗ್ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸಲೂನ್ ಶಾಪ್ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದ್ದು, ಜಿಲ್ಲೆಯಲ್ಲಿ ಈವರೆಗೆ 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದುವರೆಗೂ ಐವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಕೋಲಾರ ಜಿಲ್ಲೆಗೆ ಹೊರ ರಾಜ್ಯ, ವಿದೇಶದಿಂದ ಬಂದವರಿಂದಲೇ ಕಂಟಕ ಎದುರಾಗುತ್ತಿದೆ. ಸದ್ಯಕ್ಕೆ ಮಲೇಷಿಯಾದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿರುವುದು ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ.
ಈ ನಡುವೆ ಸಲೂನ್ ಶಾಪ್‍ನಿಂದ ಬಂಗಾರಪೇಟೆಗೆ ಆತಂಕ ಶುರುವಾಗಿದೆ. ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರಕ್ಕೆ ಮಲೇಷಿಯಾದಿಂದ ಬಂದಿದ್ದ ರೋಗಿ 3186 ವ್ಯಕ್ತಿ ಬಂಗಾರಪೇಟೆ ಪಟ್ಟಣದ ಸೂಪರ್ ಜೆಂಟ್ಸ್ ಪಾರ್ಲರ್‍ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದ. ಅದಾದ ನಂತರ ಸುಮಾರು 15ಕ್ಕೂ ಹೆಚ್ಚು ಜನ ಹೇರ್‍ಕಟ್ ಮಾಡಿಸಿಕೊಳ್ಳಲು ಹೋಗಿದ್ದು, ಅವರಿಗಾಗಿ ಅಧಿಕಾರಿಗಳು ಹುಡುಕಾಟ ಮಾಡುತ್ತಿದ್ದಾರೆ.
ಅಲ್ಲದೇ ಆ ದಿನ ಯಾರೆಲ್ಲ ಶೇವಿಂಗ್ ಮತ್ತು ಕಟ್ಟಿಂಗ್ ಮಾಡಿದ್ದಾರೋ ಅವರೆಲ್ಲ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕೆಂದು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣದ ಬೀದಿ ಬೀದಿಯಲ್ಲಿ ಮೈಕ್‍ನಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ಈ ಮೂಲಕ ಸಲೂನ್ ಶಾಪ್‍ನಿಂದ ಬಂಗಾರಪೇಟೆ ಪಟ್ಟಣದಲ್ಲಿ ಆತಂಕ ಶುರುವಾಗಿದೆ. ಇನ್ನೂ ಮಲೇಷಿಯಾ ನಂಜು ಎಷ್ಟು ಜನರನ್ನು ಆವರಿಸಲಿದೆ ಎಂದು ಆರೋಗ್ಯಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಲೂನ್ ಮಾಲೀಕರಿಂದ ವಿಭಿನ್ನ ಪ್ರಯತ್ನ:
ಕೋಲಾರದಲ್ಲಿ ಎಚ್ಚೆತ್ತ ಸಲೂನ್ ಮಾಲೀಕರು ಸಲೂನ್‍ನಲ್ಲಿ ಪಿಪಿಇ ಕಿಟ್ ಧರಿಸಿ ಗ್ರಾಹಕರಿಗೆ ಕಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಮಂಜುನಾಥ್ ಹೇರ್ ಕಟಿಂಗ್ ಶಾಪ್‍ನ ಮಾಲೀಕ ಮಂಜುನಾಥ್ ವಿಭಿನ್ನ ಪ್ರಯತ್ನ ಮಾಡುತ್ತಿದ್ದು, ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಹೇರ್ ಕಟಿಂಗ್ ಮಾಡುತ್ತಿದ್ದಾರೆ. ಸೋಂಕು ಹರಡದಂತೆ ಸಲೂನ್ ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
https://youtu.be/OYEMtBeW6b0