ಆಕ್ಲೆಂಡ್: ಟೀಂ ಇಂಡಿಯಾದ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತೊಮ್ಮೆ ತಾನೊಬ್ಬ ಅತ್ಯುತ್ತಮ ಫೀಲ್ಡರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
175 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡಿಗೆ ಜಡೇಜಾ ಫೀಲ್ಡಿಂಗ್ ಮೂಲಕ ಶಾಕ್ ನೀಡಿದ್ದರು. ನವದೀಪ್ ಸೈನಿ ಎಸೆದ 35ನೇ ಓವರಿನ ಎರಡನೇ ಎಸೆತದಲ್ಲಿ ರಾಸ್ ಟೇಲರ್ ಒಂಟಿ ರನ್ ಪಡೆಯಲು ಯತ್ನಿಸಿದರು. ಬ್ಯಾಕ್‍ವರ್ಡ್ ಪಾಯಿಂಟ್ ನತ್ತ ಬರುತ್ತಿದ್ದಂತೆ ಅಲ್ಲಿಂದ ಜಡೇಜಾ ಎಡಗೈಯಲ್ಲಿ ಬಾಲ್ ಹಿಡಿದು ನೇರವಾಗಿ ಸ್ಟ್ರೈಕ್ ನಲ್ಲಿದ್ದ ವಿಕೆಟಿಗೆ ಥ್ರೋ ಮಾಡಿದರು.
ನೀಶಮ್ ವೇಗವಾಗಿ ಓಡಿದ್ದರೂ ಕ್ರೀಸ್ ತಲುಪವ ಮುನ್ನವೇ ಬಾಲ್ ವಿಕೆಟಿಗೆ ಬಡಿದಿತ್ತು. ಬಾಲ್ ವಿಕೆಟಿಗೆ ಬಿದ್ದಿದ್ದನ್ನು ಕಂಡು ಜಡೇಜಾ ಅಲ್ಲೇ ಹಾರಿ ಸಂಭ್ರಮಿಸಿದರು. ಮೂರನೇ ಅಂಪೈರ್ ಸ್ಕ್ರೀನಿನಲ್ಲಿ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಭಾರತೀಯ ಆಟಗಾರರು ಸಂಭ್ರಮಿಸಿ ಜಡೇಜಾ ಅವರನ್ನು ಅಭಿನಂದಿಸಿದರು. 3 ರನ್ ಗಳಿಸಿದ ನೀಶಮ್ ಸಪ್ಪೆ ಮುಖವನ್ನು ಹಾಕಿಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿದೆ. ಮಾರ್ಟಿನ್ ಗಪ್ಟಿಲ್ 79 ರನ್(79 ಎಸೆತ, 8 ಬೌಂಡರಿ, 3 ಸಿಕ್ಸರ್), ಹೆನ್ರಿ ನಿಕೋಲಸ್ 41 ರನ್(59 ಎಸೆತ, 5 ಬೌಂಡರಿ), ರಾಸ್ ಟೇಲರ್ ಔಟಾಗದೇ 73 ರನ್(74 ಎಸೆತ, 6 ಬೌಂಡರಿ, 2 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಬೌಲರ್ ಕೈಲ್ ಜಾಮಿಸನ್ ಔಟಾಗದೇ 25 ರನ್(24 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದ ಪರಿಣಾಮ ನ್ಯೂಜಿಲೆಂಡ್ ಉತ್ತಮ ಮೊತ್ತ ಪೇರಿಸಿತು. ಚಹಲ್ 3 ವಿಕೆಟ್ ಪಡೆದರೆ ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರು.