ಬೆಂಗಳೂರು, ಏ.26- ಆನೆಕಲ್ ನಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿದ ಕೃತ್ಯದ ಹಿಂದೆ ಏನೆಲ್ಲಾ ಮಾತುಕತೆಗಳಾಗಿವೆ ಎಂದು ನನಗೆ ಗೋತ್ತಿದೆ. ಈಗ ಎಲ್ಲವನ್ನು ಚರ್ಚೆ ಮಾಡುವ ಕಾಲವಲ್ಲ. ಸುಮ್ಮನೆ ನನ್ನ ಕೆಣಕಿ ಮರ್ಯಾದೆ ಕಳೆದುಕೊಳ್ಳುದು ಬೇಡ. ಮುಂದಾಗಬೇಕಿರುವ ಕೆಲಸದತ್ತ ಸಚಿವರು ಗಮನ ಕೊಡಲಿ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಗಜ್ಯೋತಿ ಬಸವೇಶ್ವರರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ಪಡಿತರ ವ್ಯವಸ್ಥೆಯಡಿ ಹಂಚಿಕೆ ಮಾಡಲು ತಂದಿದ್ದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದನ್ನು ಸರ್ಕಾರ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ.
ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ತಮ್ಮ ಅಧಿಕಾರಿಗಳನ್ನು ಮುಚ್ಚಿಟ್ಟುಕೊಳ್ಳುತ್ತಿದ್ದಾರೆ. ಅಕ್ಕಿ ದಾಸ್ತಾನು ಸಕ್ರಮವಾಗಿದ್ದರೆ ಮೊದಲೇ ಯಾಕೆ ಅನುಮತಿ ಪಡೆಯಲಿಲ್ಲ, ಘೋಷಣೆ ಯಾಕೆ ಮಾಡಿಕೊಳ್ಳಲಿಲ್ಲ ಎಂದು ಪ್ರಶ್ನೆಸಿದರು.
ನ್ಯಾಯಬೆಲೆ ಅಂಗಡಿಯ ಅಕ್ಕಿಯನ್ನು ಬೇಕಾಬಿಟ್ಟಿ ದಾಸ್ತಾನು ಮಾಡಲು ಆಗಲ್ಲ. ಮೊದಲೇ ಘೋಷಣೆ ಮಾಡಿಕೊಳ್ಳಬೇಕು. ಗೋಪಾಲಯ್ಯ ಅವರಿಗಿಂತ ಮೊದಲೇ ಸಚಿವನಾಗಿ ಕೆಲಸ ಮಾಡಿದ್ದೇನೆ. ಸರ್ಕಾರದ ವ್ಯವಸ್ಥೆ ನನಗೆ ಚೆನ್ನಾಗಿ ಗೋತ್ತಿದೆ. ಸುಮ್ಮನೆ ಎಲ್ಲವನ್ನು ಕೆಣಕುವುದು ಬೇಡ. ಅದರಲ್ಲೂ ನನ್ನ ಕೆಣಕಿ ಮರ್ಯಾದೆ ಕಳೆಯುವುದು ಬೇಡ.
ಅಕ್ಕಿ ದಾಸ್ತಾನು ವಿಷಯದಲ್ಲಿ ಅಧಿಕಾರಿಗಳ ಜೊತೆ ಏನೇಲ್ಲಾ ಚರ್ಚೆಯಾಗಿದೆ ಎಂಬುದು ನನಗೆ ಗೋತ್ತಿದೆ. ಆದರೆ ಅದನ್ನೇಲ್ಲಾ ಚರ್ಚಿಸಲು ಇದು ಸಕಾಲವಲ್ಲ. ಮೊದಲು ಜನರ ರಕ್ಷಣೆ ಮಾಡಲಿ, ಜೀವ ಉಳಿದುಕೊಂಡರೆ ಆಮೇಲೆ ಉಳಿದ ವಿಷಯ. ಸರ್ಕಾರ ಮೊದಲು ಹಸಿದವರಿಗೆ ಅಕ್ಕಿ ಕೊಟ್ಟು ಜೀವ ಉಳಿಸುವ ಕೆಲಸ ಮಾಡಲಿ ಎಂದು ಹೇಳಿದರು.