ನವದೆಹಲಿ: ಕೊರೊನಾ ಪರಿಹಾರ ಪ್ಯಾಕೇಜ್‍ನ ಐದನೇ ಮತ್ತು ಕೊನೆಯ ಹಂತದ ಘೋಷಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿವರಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಇಂದು ನರೇಗಾ, ಆರೋಗ್ಯ, ಶಿಕ್ಷಣ, ವ್ಯವಹಾರ, ಕಂಪನಿಗಳ ಕಾಯ್ದೆಗಳಿಗೆ ಸಂಬಂಧಿಸಿದ ಕೆಲವು ಮಾಹಿತಿ ಪ್ರಕಟಿಸಿದರು. ನರೇಗಾ ಯೋಜನೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ನೀಡಲಾಗಿದೆ. ಒಂದು ವರ್ಷದವರೆಗೆ ಕಂಪನಿಗಳ ಮೇಲೆ ಯಾವುದೇ ದಿವಾಳಿತ ಕ್ರಮ ಇರುವುದಿಲ್ಲ. ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳನ್ನು ತೆರೆಯಲಾಗುವುದು. ಕೊರೊನಾ ವೈರಸ್ ಬಳಿಕ ಕೇಂದ್ರ ಸರ್ಕಾರ ಒಟ್ಟು 20,97,530 ಕೋಟಿ ರೂ. ಪ್ಯಾಕೇಜ್ ಘೋಷಿಸಿವೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್ ಉಂಟು ಮಾಡಿದ ಸಂಕಷ್ಟದಿಂದಾಗಿ ರಾಜ್ಯಗಳು ಮತ್ತು ಕೇಂದ್ರದ ಆದಾಯ ಕಡಿಮೆಯಾಗುತ್ತಿದೆ. ಇದರ ಹೊರತಾಗಿಯೂ ರಾಜ್ಯಗಳಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದೇವೆ. ಸಾಲ ಮಿತಿಯನ್ನು ಶೇ.3ರಿಂದ ಶೇ.5ಕ್ಕೆ ಏರಿಸಲಾಗಿದೆ. ಇದರಿಂದ ರಾಜ್ಯಗಳಿಗೆ ಹೆಚ್ಚುವರಿ 4.28 ಲಕ್ಷ ಕೋಟಿ ರೂ. ದೊರೆಯುತ್ತದೆ ಎಂದು ಸೀತಾರಾಮಾನ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಭಾಷಣಕ್ಕೂ ಮುನ್ನ 1,92,800 ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿತ್ತು. ಆ ಬಳಿಕ ವಿತ್ತ ಸಚಿವೆ ಸೀತಾರಾಮನ್ ಅವರು ಮೊದಲ ಸುದ್ದಿಗೋಷ್ಠಿಯಲ್ಲಿ 5,94,550 ಕೋಟಿ ರೂ, ಎರಡನೇ ಸುದ್ದಿಗೋಷ್ಠಿ 3.10 ಲಕ್ಷ ಕೋಟಿ ರೂ. ಘೋಷಿಸಿದ್ದರು. ಆ ಬಳಿಕ ಮೂರನೇ ಸುದ್ದಿಗೋಷ್ಠಿಯಲ್ಲಿ 1.50 ಲಕ್ಷ ಕೋಟಿ ರೂ., ನಾಲ್ಕನೇ ಸುದ್ದಿಗೋಷ್ಠಿಯಲ್ಲಿ 8,100 ಕೋಟಿ ರೂ, ಹಾಗೂ ಇಂದು ಐದನೇ ಸುದ್ದಿಗೋಷ್ಠಿಯಲ್ಲಿ 40 ಸಾವಿರ ಕೋಟಿ ರೂ. ಘೋಷಿಸಿದರು. ಜೊತೆಗೆ ಆರ್‌ಬಿಐ 8,01,603 ಕೋಟಿ ರೂ. ಪ್ಯಾಕೇಜ್ ನೀಡಿತ್ತು. ಈ ಎಲ್ಲ ಮೊತ್ತವು 20,97,053 ಕೋಟಿ ರೂ. ಆಗಿದೆ ಎಂದು ಹೇಳಿದರು.