ನವದೆಹಲಿ: ಮೊದಲ ದಿನ ಉದ್ಯಮಗಳಿಗೆ, ಎರಡನೇ ದಿನ ಕಾರ್ಮಿಕರಿಗೆ ಪ್ಯಾಕೇಜ್ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇಂದು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ಚಟುವಟಿಕೆಗಳನ್ನು ಮೇಲಕ್ಕೆ ಎತ್ತಲು ವಿಶೇಷ ಪ್ಯಾಕೇಜ್ ಪ್ರಕಟಿಸಿದೆ.
ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಒಟ್ಟು 18,700 ಕೋಟಿ ರೂ. ಹಣವನ್ನು ರೈತರಿಗೆ ನೀಡಲಾಗಿದೆ. ಫಸಲ್ ಭೀಮಾ ಯೋಜನೆಯ ಅಡಿ ಒಟ್ಟು 6,400 ರೂ. ಹಣವನ್ನು ಪಾವತಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಮುಖ್ಯಾಂಶಗಳು:
ಲಾಕ್‍ಡೌನ್ ಸಮಯದಲ್ಲಿ ಹಾಲಿನ ಬೇಡಿಕೆ ಶೇ20-25ರಷ್ಟು ಇಳಿಕೆಯಾಗಿದೆ. ದೇಶದ ಸಹಕಾರಿ ಸಂಘಗಳಲ್ಲಿ ಪ್ರತಿದಿನ 560 ಲಕ್ಷ ಲೀಟರ್ ಹಾಲಿನ ಉತ್ಪಾದನೆಯಾಗಿದ್ದರೆ 360 ಲಕ್ಷ ಲೀಟರ್ ಹಾಲು ಮಾರಾಟವಾಗಿದೆ.
ಮೀನುಗಾರರಿಗೆ ನೆರವು ನೀಡಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಆರಂಭಿಸಲಾಗುವುದು. ಈ ಯೋಜನೆಗೆ 20 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿದೆ.
ಸಮುದ್ರ, ದೇಶದ ಒಳಗಿನ ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಗೆ 11 ಸಾವಿರ ಕೋಟಿ ರೂ. ಪ್ಯಾಕೇಜ್. ಕೋಲ್ಡ್ ಚೈನ್, ಮಾರುಕಟ್ಟೆ, ಮೀನುಗಾರಿಕಾ ಬಂದರುಗಳಿಗೆ ಒಟ್ಟು 9 ಸಾವಿರ ಕೋಟಿ ರೂ. ಅನುದಾನ.
ಮೀನುಗಾರಿಕೆಗೆ ನಿಷೇಧ ಹೇರಿದ ಸಮಯದಲ್ಲಿ ಮೀನುಗಾರರ ವೈಯಕ್ತಿಕ ಮತ್ತು ದೋಣಿಗಳಿಗೆ ವಿಮೆ. ಈ ಉತ್ತೇಜನ ಕ್ರಮಗಳಿಂದ ಮುಂದಿನ 5 ವರ್ಷದಲ್ಲಿ 70 ಲಕ್ಷ ಟನ್ ಗಳಿಗೆ ಮೀನು ಉತ್ಪಾದನೆ ಏರಿಕೆಯಾಗಲಿದೆ. ಒಟ್ಟು 55 ಲಕ್ಷ ಜನರಿಗೆ ಉದ್ಯೋಗ, 1 ಲಕ್ಷ ಕೋಟಿ ರೂ. ಮೌಲ್ಯ ರಫ್ತು ಆಗಲಿದೆ.