Breaking News

ಲಾಕ್‍ಡೌನ್ ನಡುವೆ ಗ್ರಾಹಕರಿಗೆ ಕರೆಂಟ್ ಶಾಕ್ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

Spread the love

ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಬೇಕಾಬಿಟ್ಟಿ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳು ಅವೈಜ್ಞಾನಿಕ ವಿದ್ಯುತ್ ಬಿಲ್ ವಸೂಲಿಗೆ ಇಳಿದಿವೆ.

ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಗ್ರಾಹಕರ ಮೇಲೆ ಬರೆ ಎಳೆಯುವ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಮಾರ್ಚ್ ತಿಂಗಳ ಬಿಲ್ ನೀಡಿರಲಿಲ್ಲ. ಮೇ ತಿಂಗಳಿನಲ್ಲಿ ಎರಡೂ ತಿಂಗಳ ಅಂದ್ರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ನೀಡಿವೆ. ಹಿಂದಿನ ಮೂರು ತಿಂಗಳ ಸರಾಸರಿ ಆಧಾರದ ಮೇಲೆ ಬಿಲ್ ನೀಡಿರುವುದು ಅವೈಜ್ಞಾನಿಕ ಎಂದು ಸಾವಿರಾರು ಗ್ರಾಹಕರು ಆರೋಪಿಸುತ್ತಿದ್ದಾರೆ.

ಕೇಸ್ ನಂ.1: ರಾಜು ಬಿರ್ಜಣ್ಣ, ಧಾರವಾಡ
ಹಳೆ ಬಿಲ್ 130 ರೂ. – ಹೊಸ ಬಿಲ್ 7.64 ಲಕ್ಷ ರೂ.
ರಾಜು ಬಿರ್ಜಣ್ಣರದ್ದು ಚಿಕ್ಕ ಮನೆ, 3 ಲೈಟ್, ಒಂದು ಫ್ಯಾನ್, ಟಿವಿ ಇದೆ. ಪ್ರತಿ ತಿಂಗಳು 130 ರೂ. ಬರುತ್ತಿತ್ತು. ಈ ಬಾರಿ 7.64 ಲಕ್ಷ ರೂ. ಬಂದಿದೆ. ಹೆಸ್ಕಾಂನವರಿಗೆ ಕರೆ ಮಾಡಿ ತಿಳಿಸಿದ ನಂತರ ಸಿಬ್ಬಂದಿ ಬಂದು ಬಿಲ್ ವಾಪಸ್ ಪಡೆದುಕೊಂಡು ಹೋಗಿದ್ದಾರೆ.

ಕೇಸ್ ನಂ.2: ಆಸ್ವಿತ್, ಹೊಸಪೇಟೆ (ಬಳ್ಳಾರಿ)
ಹಳೆ ಬಿಲ್ 861 ರೂ. – ಹೊಸ ಬಿಲ್ 10,017 ರೂ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರ ನಿವಾಸಿ ಆಸ್ವಿತ್ ಅವರಿಗೆ ಪ್ರತಿ ಬಾರಿಗಿಂತ 10 ಪಟ್ಟು ಹೆಚ್ಚು ಬಿಲ್ ಬಂದಿದೆ. ಈ ಬಗ್ಗೆ ಜೆಸ್ಕಾಂಗೆ ಕೇಳಿದರೆ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ. ಅಧಿಕಾರಿಗಳು ನಮ್ಮ ತಪ್ಪೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಬಿಲ್‍ನಲ್ಲಿ ಡಿಸೆಂಬರ್ 2019ರಿಂದ ಬಿಲ್ ಜನರೇಟ್ ಆಗಿದೆ. ಆದರೆ ಇವರು ಡಿಸೆಂಬರ್‍ನಿಂದ ಪ್ರತಿ ತಿಂಗಳು ಸಹ ಬಿಲ್ ಕಟ್ಟಿದ್ದಾರೆ

ಕೇಸ್ ನಂ.3: ಅಬ್ದುಲ್ ರೆಹಮಾನ್, ಕಲಬುರಗಿ
ಹಳೆ ಬಿಲ್ 961 ರೂ. – ಹೊಸ ಬಿಲ್ 6,800 ರೂ.
ಕಲಬುರಗಿಯಲ್ಲಿ ಜೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿ ಬಿಲ್ ನೀಡಿದ್ದು ಗ್ರಾಹಕರು ಶಾಕ್ ಆಗಿದ್ದಾರೆ. ಕಲಬುರಗಿಯ ಅಬ್ದುಲ್ ರೆಹಮಾನ್‍ಗೆ ಪ್ರತಿ ತಿಂಗಳು 900ರಿಂದ 1000 ರೂ. ಬಿಲ್ ಬರುತ್ತಿತ್ತು. ಈ ಬಾರಿ 6,813 ರೂ ಬಂದಿದೆ. ಬಹುತೇಕ ಕಡೆ ಪ್ರತಿ ಮೀಟರ್ ಲೆಕ್ಕದಲ್ಲಿ 50 ರೂ. ಹೆಚ್ಚು ಪಡೆಯಲಾಗ್ತಿರೋ ಆರೋಪ ಕೇಳಿಬಂದಿದೆ.

ಕೇಸ್ ನಂ.4: ಮಧು, ದಾವಣಗೆರೆ
ಹಳೆ ಬಿಲ್ 720ರೂ. – ಹೊಸ ಬಿಲ್ 5,299 ರೂ.
ದಾವಣಗೆರೆ ಜನರಿಗೂ ಬೆಸ್ಕಾಂ ಶಾಕ್ ನೀಡಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕಡಿಮೆ ಬಿಲ್ ಬಂದರೆ ಈ ಬಾರಿ 3 ರಿಂದ 5 ಪಟ್ಟು ಹೆಚ್ಚು ಬಿಲ್ ಬಂದಿದೆ. ಏಪ್ರಿಲ್ ತಿಂಗಳು ಬಿಟ್ಟು ಮೇ ತಿಂಗಳ ಬಿಲ್ ನೋಡಿದ ಜನ ಶಾಕ್ ಆಗಿದ್ದಾರೆ. ಸಾವಿರ ರೂ.ಒಳಗೆ ಬರುತ್ತಿದ್ದವರಿಗೆ ಐದಾರು ಸಾವಿರ ಬಿಲ್ ಬಂದಿದೆ. ಬೆಸ್ಕಾಂ ಯಡವಟ್ಟಿಗೆ ಜನ ಚಿಂತಾಕ್ರಾಂತರಾಗಿದ್ದಾರೆ.

 

ಕೇಸ್ ನಂ.5: ಹನುಮಂತಪ್ಪ ಕಬ್ಬಾರ, ರಾಣೇಬೆನ್ನೂರು (ಹಾವೇರಿ )
ಹಳೆ ಬಿಲ್ 349 ರೂ. – ಹೊಸ ಬಿಲ್ 1,324 ರೂ.
ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲೂ ಗ್ರಾಹಕರಿಗೆ ಹೆಸ್ಕಾಂ ಬರೆ ಹಾಕಿದೆ. ಕೆಲವರಿಗೆ 3 ತಿಂಗಳ ಹೆಚ್ಚುವರಿ ಹಣವನ್ನು ಈ ಬಾರಿಯ ಬಿಲ್‍ನಲ್ಲಿ ಸೇರಿಸಿದ್ದಾರೆ. ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ ಕಂಗಾಲಾಗಿರುವ ಜನರಿಗೆ ಹೆಚ್ಚು ಬಿಲ್ ಹಾಕಿ ತೊಂದರೆ ಕೊಡುತ್ತಿದ್ದಾರೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕೇಸ್ ನಂ.6: ಅಶೋಕ್ ಶಂಕರಪ್ಪ, ಗದಗ
ಹಳೆ ಬಿಲ್ 250ರೂ. – ಹೊಸ ಬಿಲ್ 1,111ರೂ.
ಲಾಕ್‍ಡೌನ್ ಸಂಕಷ್ಟದಲ್ಲಿದ್ದ ಗದಗ ಜನರಿಗೆ ಹೆಸ್ಕಾಂ ಕರೆಂಟ್ ಶಾಕ್ ನೀಡಿದೆ. ಈ ಬಾರಿ ಬರೋಬ್ಬರಿ 4 ಪಟ್ಟು ಹೆಚ್ಚು ಬಿಲ್ ಬಂದಿದೆ. ಮನೆಯಲ್ಲಿ ಒಂದು ಟಿವಿ, ಒಂದು ಫ್ಯಾನ್, ಒಂದು ಫ್ರಿಡ್ಜ್ ಮಾತ್ರ ಬಳಸುತ್ತಿದ್ದರೂ ಹೆಚ್ಚು ಬಿಲ್ ಹಾಕಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕೇಸ್ ನಂ.7: ಜಮುನಾ ಚಂದ್ರ, ಅರಸೀಕೆರೆ ( ಹಾಸನ )
ಹಳೆ ಬಿಲ್ 1,000ರೂ. – ಹೊಸ ಬಿಲ್ 3,515ರೂ.
ಹಾಸನ ಜಿಲ್ಲೆ ಅರಸೀಕೆರೆಯಲ್ಲೂ ಈ ಬಾರಿ 1ರಿಂದ 2 ಪಟ್ಟು ಬಿಲ್ ಹೆಚ್ಚು ಬಂದಿದೆ. ಹಾಸನ ಜಿಲ್ಲೆಯಲ್ಲಿ 2 ತಿಂಗಳ ಕರೆಂಟ್ ಬಿಲ್ ಒಟ್ಟಿಗೆ ಕೊಟ್ಟಿದ್ದಾರೆ. ಆದರೆ ಹೆಚ್ಚುವರಿ ಬಿಲ್ ಕೊಟ್ಟಿದ್ದಾರೆ. ಬಹುತೇಕ ಮನೆಗಳ ಬಿಲ್ ದುಬಾರಿಯಾಗಿದೆ.

 

ಕೇಸ್ ನಂ.8: ಅನಂತ್, ವಿಜಯಪುರ
ಹಳೆ ಬಿಲ್ 300 ರೂ. – ಹೊಸ ಬಿಲ್ 1,144 ರೂ.
ಕೊರೋನಾ ಅಬ್ಬರದ ಮಧ್ಯೆ ಲಾಕ್ ಆಗಿರೋ ವಿಜಯಪುರದ ಜನರಿಗೆ ಈ ತಿಂಗಳು ಕರೆಂಟ್ ಶಾಕ್ ಹೊಡೆದಿದೆ. ಒಬ್ಬೊಬ್ಬರಿಗೆ 500 ರಿಂದ 1000 ರೂ. ಹೆಚ್ಚು ಬಿಲ್ ಬಂದಿದೆ. ಲಾಕ್‍ಡೌನ್ ವೇಳೆ ಡಬಲ್ ಬಿಲ್ ಕೊಟ್ಟಿದ್ದಾರೆ. ಇದು ಸರಿಯಲ್ಲ, ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಅಂತ ಜನ ಆಗ್ರಹಿಸಿದ್ದಾರೆ.

 

ಕೇಸ್ ನಂ.9: ಬೆಂಗಳೂರು
ಹಳೆ ಬಿಲ್ 1,047ರೂ. – ಹೊಸ ಬಿಲ್ 4,601 ರೂ.
ಫೆಬ್ರವರಿ ತಿಂಗಳ ಬಿಲ್ 1,047 ರೂಪಾಯಿ ಬಂದಿದೆ. ಆದರೆ ಮಾರ್ಚ್ ಏಪ್ರಿಲ್ ಎರಡು ತಿಂಗಳ ಬಿಲ್ ಅಂತ 4,601 ರೂಪಾಯಿ ಬಂದಿರೋದು ಈ ಕುಟುಂಬಕ್ಕೆ ತಲೆ ತಿರುಗುವಂತೆ ಮಾಡಿದೆ.

 

ಕೇಸ್ ನಂ. 10: ಬೆಂಗಳೂರು
ಹಳೆ ಬಿಲ್ 1,560 ರೂ. – ಹೊಸ ಬಿಲ್ 4,366 ರೂ.
1,560 ರೂ. ಬರ್ತಿದ್ದ ಈ ಮನೆಯಲ್ಲಿ 4,366 ರೂಪಾಯಿ ಎರಡು ತಿಂಗಳ ಬಿಲ್ ಅಂತ ಬಂದಿದೆ. ಕೆಲಸ ಇಲ್ಲ, ಸಂಬಳ ಇಲ್ಲ ಈ ಟೈಮಿನಲ್ಲಿ ಹೀಗ್ ಬಿಲ್ ಬಂದರೆ ಏನ್ ಮಾಡೋದು ಅನ್ನುತ್ತೆ ಈ ಕುಟುಂಬ.

ದೂರು ಇದ್ಯಾ…? ಸಂಪರ್ಕಿಸಿ
ಮೆಸ್ಕಾಂ
ಹೆಲ್ಪ್ ಲೈನ್ ನಂಬರ್- 0824-2885766
ಇಮೇಲ್ -seemngmescom17@rediffmail.com
ಟ್ವಿಟ್ಟರ್ – @MESCOM Official

ಸೆಸ್ಕಾಂ
ಹೆಲ್ಪ್ ಲೈನ್: 1912
ಇಮೇಲ್ : md@cescmysgmail.com
ಟ್ವಿಟ್ಟರ್: @CESCMysore

ಹೆಸ್ಕಾಂ
ಹೆಲ್ಪ್ ಲೈನ್: 1912
ಇಮೇಲ್: md@hescom.co.in
ಟ್ವಿಟ್ಟರ್: @HubliHescom

ಜೆಸ್ಕಾಂ
ಹೆಲ್ಪ್ ಲೈನ್: 0847-2256581.
ಇಮೇಲ್: gescomofficial@gmail.com
ಟ್ವಿಟ್ಟರ್: @GESComNews

ಬೆಸ್ಕಾಂ
ಬೆಸ್ಕಾಂ ಹೆಲ್ಪ್ ಲೈನ್- 1912
ಇಮೇಲ್ – helplinebescom@gmail.com.
ಟ್ವಿಟ್ಟರ್ – @NammaBESCOM-


Spread the love

About Laxminews 24x7

Check Also

ಬಿ.ವೈ.ವಿಜಯೇಂದ್ರ ವಿರುದ್ಧ ಸಿಡಿದೆದ್ದ ರಮೇಶ ಜಾರಕಿಹೊಳಿ,ಯತ್ನಾಳ,ಬೆಳಗ್ಗೆ 11.30ಕ್ಕೆ ಪತ್ರಿಕಾಗೋಷ್ಠಿ

Spread the loveಬೆಂಗಳೂರು : ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಮುಖಂಡರು ಶುಕ್ರವಾರ ಪತ್ರಿಕಾಗೋಷ್ಠಿ ಕರೆದಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ