ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತ ಬಂದ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರ ಸರಿಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಪ್ರತಿಕ್ರಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ದೇಶದ ಹಿತ ದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿದೆ. ಅಲ್ಲದೇ ಸಾಮಾಜಿಕ ಸಂಪರ್ಕದಿಂದ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತ ಬಂದ್ ಮಾಡಿರುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ದೇಶದ 80 ಕೋಟಿ ಜನರಿಗೆ ಪಡಿತರ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಜಾವೇಡ್ಕರ್ ಹೇಳಿದರು.
ಪ್ರತಿ ವ್ಯಕ್ತಿಗೆ ಏಳು ಕೆ.ಜಿ ಪಂಡಿತರ ನೀಡಲು ನಿರ್ಧರಿಸಿದ್ದು, ಗೋಧಿ ಎರಡು ರೂಪಾಯಿ, ಅಕ್ಕಿ ಮೂರು ರೂಪಾಯಿಗೆ ಕೆ.ಜಿಯಂತೆ ವಿತರಣೆ ಮಾಡಲಾಗುವುದು. ಈ ಮೂಲಕ ದೇಶದ ಜನರ ನೆರವಿಗೆ ಕೇಂದ್ರ ಸರ್ಕಾರ ಬರಲಿದೆ. ಹೀಗಾಗಿ ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.
ಜನರು ಮನೆಯಲ್ಲಿದ್ದು ಸಹಕಾರ ನೀಡಬೇಕು. ಪ್ರತಿ ಬಾರಿ ಯಾವುದಾದರೂ ಕೆಲಸ ಮಾಡಿದ ಬಳಿಕ ಸಾಬೂನಿನಿಂದ ಕೈ ತೊಳೆಯಬೇಕು. ಗಾಳಿ ಮಾತಿಗೆ ಕಿವಿಗೊಟ್ಟು ಮನೆಯಿಂದ ಆಚೆ ಬಾರಬಾರದು. ಕೆಮ್ಮು ಕಫ, ಜ್ವರ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕಲ್ಲಿ ಮನವಿ ಮಾಡಿಕೊಂಡರು.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ ಸಭೆಯಲ್ಲಿ ಸೋಶಿಯಲ್ ಡಿಸ್ಟೇನ್ಸ್ ಫಾಲೋ ಮಾಡುವ ಮೂಲಕ ನುಡಿದಂತೆ ನಡೆದು ತೋರಿಸಿದರು. ಮಂಗಳವಾರ ಭಾಷಣದಲ್ಲಿ ಮಾತನಾಡಿದ್ದ ಅವರು ಪ್ರಧಾನಿನಿಂದ ಸಾಮಾನ್ಯನ ವರೆಗೂ ಎಲ್ಲರೂ ಅಂತರ ಕಾಯ್ದೆಕೊಳ್ಳಬೇಕು ಎಂದಿದ್ದರು.
ಅದರಂತೆ ಇಂದು ನಡೆದ ಸಭೆಯಲ್ಲಿ ಎಲ್ಲ ಕೇಂದ್ರ ಸಚಿವರು ದೂರದಲ್ಲಿ ಕೂತು ಸಭೆ ನಡೆಸಿದ್ದಾರೆ. ಈ ಮೂಲಕ ದೇಶಕ್ಕೆ ಹೊಸ ಸಂದೇಶ ರವಾನಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದರು.