Breaking News

ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ಸೋಂಕು ಹಬ್ಬದಂತೆ ಮುಂಜಾಗ್ರತಾ ಕ್ರಮವಾಗಿ ಹಾಲಿ ಇರುವ ಮಾರ್ಗಸೂಚಿಯನ್ನೇ ಮುಂದುವರೆಸಲು ತೀರ್ಮಾನಿಸಲಾಗಿದ್ದು, ಈ ತಿಂಗಳ 31ರವರೆಗೆ ಬಂದ್

Spread the love

ಬೆಂಗಳೂರು,ಮಾ.- ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ಸೋಂಕು ಹಬ್ಬದಂತೆ ಮುಂಜಾಗ್ರತಾ ಕ್ರಮವಾಗಿ ಹಾಲಿ ಇರುವ ಮಾರ್ಗಸೂಚಿಯನ್ನೇ ಮುಂದುವರೆಸಲು ತೀರ್ಮಾನಿಸಲಾಗಿದ್ದು, ಈ ತಿಂಗಳ 31ರವರೆಗೆ ಬಂದ್ ಮುಂದುವರೆಯಲಿದೆ.ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾರಿಗೂ ಹಬ್ಬದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾ.31ರವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಲು ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನವನ್ನು ವಿಧಾನಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಕಟಿಸಿದರು. ಜನಸಮೂಹ, ಮಾಲ್‍ಗಳು, ಸಭೆಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರುವುದನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಕೊರೋನಾ ವೈರಸ್ ತಡೆಗೆ ರಾಜ್ಯ ಸರ್ಕಾರ 200 ಕೋಟಿ ತುರ್ತು ನಿಧಿಯನ್ನು ಬಿಡುಗಡೆಯನ್ನೂ ಮಾಡಿದೆ.

ಇದರ ಜೊತೆಗೆ ಕೊರೋನಾ ವೈರಸ್‍ನ ಪ್ರತಿದಿನ ಬೆಳವಣಿಗೆಯನ್ನು ಅವಲೋಕಿಸಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಡಾ.ಅಶ್ವಥ್ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮಲು ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಅನಗತ್ಯ ಗೊಂದಲಗಳಿಗೆ ಕಿವಿಗೊಡದೆ ಸರ್ಕಾರ ಸೂಚಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಯಾರೇ ಆಗಲಿ ಸುಳ್ಳು ವದಂತಿಗಳನ್ನು ಹಬ್ಬಿಸಿದರೆ ಅಂಥವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ತಿಳಿಸಿದರು.ಪ್ರತಿನಿತ್ಯ ಈ ಕಾರ್ಯಪಡೆಯು ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಯಾವ ಯಾವ ಜಿಲ್ಲೆಗಳಲ್ಲಿ ಏನೇನು ಬೆಳವಣಿಗೆಯಾಗಿದೆ ಎಂಬುದನ್ನು ಮಾಹಿತಿ ನೀಡಬೇಕು. ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ಷಣಕ್ಷಣಕ್ಕೂ ತಮ್ಮ ತಮ್ಮ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸಬೇಕೆಂದು ಸೂಚಿಸಿದರು.

ಈ ತಿಂಗಳ ಅಂತ್ಯದವರೆಗೆ ನಿಷೇಧಾಜ್ಞೆ ಮುಂದುವರೆಯುತ್ತಿರುವುದರಿಂದ ನಗರಪಾಲಿಕೆ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ಚುನಾವಣೆ ಸಹ ಮುಂದೂಡಿಕೆಯಾಗುವ ಸಂಭವವಿದೆ.ಈಗಾಗಲೇ ಘೋಷಣೆಯಾಗಿರುವ ಬಂದ್ ನಾಳೆ ಮುಕ್ತಾಯವಾಗಲಿದ್ದು, ಇದನ್ನು ಮುಂದುವರೆಸುತ್ತೀರ ಎಂಬ ಮಾಧ್ಯಮಗಳವರ ಪ್ರಶ್ನೆಗೆ, ಅಂತಹ ಸಾಧ್ಯತೆಗಳು ಹೆಚ್ಚಾಗಿದೆ. ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ಜನನಿಬಿಡ ಪ್ರದೇಶ, ಮಾರುಕಟ್ಟೆ, ಮಾಲುಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ,ವಿಮಾನ ನಿಲ್ದಾಣ, ಜಾತ್ರೆಗಳು, ಆಸ್ಪತ್ರೆ, ಶಾಲಾಕಾಲೇಜು ಸೇರಿದಂತೆ ಮತ್ತಿತರ ಕಡೆ ಹೆಚ್ಚು ಜನರು ಸೇರದಂತೆ ಮನವಿ ಮಾಡಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಬಂದ್‍ನ್ನು ಮುಂದುವರೆಸಬೇಕೆಂದು ಉದ್ದೇಶಿಸಲಾಗಿದೆ.

ಅಲ್ಲದೆ ಇಂದು ಬೆಳಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದು, ನಾವು ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ವಿದೇಶದಿಂದ ಬಂದವರಲ್ಲಿ ಈ ಸೋಂಕು ಹೆಚ್ಚುತ್ತಿದ್ದು, ಇತರರಿಗೂ ಹಬ್ಬಿದೆ. ಪರಿಸ್ಥಿತಿ ನಾವಂದುಕೊಂಡಷ್ಟು ಸರಳವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ರಾಜಧಾನಿ ಬೆಂಗಳೂರು ಮತ್ತು ಗುಲ್ಬರ್ಗದಲ್ಲಿ ಈ ಪ್ರಕರಣಗಳು ಹೆಚ್ಚಾಗುತ್ತಿವೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸೋಂಕು ತಗುಲಿರುವ ಪ್ರಕರಣ ಹೆಚ್ಚುತ್ತಲೇ ಇದೆ. ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ನನಗೆ ದಾರಿಯೇ ಕಾಣುತ್ತಿಲ್ಲ ಎಂದು ನೋವು ಹೊರ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ನಿಷೇಧ ಮುಂದುವರೆಸಲು ಸಮ್ಮತಿಸಿದ್ದಾರೆ. ಒಂದು ವೇಳೆ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನವಾದರೆ ಮುಂಬರುವ ಎಲ್ಲ ಹಬ್ಬಗಳ ಮೇಲೂ ಇದು ಭಾರೀ ಪರಿಣಾಮ ಬೀರುವ ಸಾದ್ಯತೆ ಇದೆ.ಹಿಂದೂಗಳಿಗೆ ಶ್ರೇಷ್ಠ ಹಬ್ಬ ಎನಿಸಿದ ಯುಗಾದಿ ಆಚರಣೆಗೂ ಕಡಿವಾಣ ಬೀಳುವುದರಲ್ಲಿ ಸಂಶಯವಿಲ್ಲ. ಇನ್ನು ಹಬ್ಬದ ಮರುದಿನ ನಡೆಯುವ ವಸತೊಡ್ಕು ಈ ಬಾರಿ ಮಂಕಾಗಲಿದೆ. ಯುಗಾದಿ ನಂತರ ಶ್ರೀರಾಮ ನವಮಿ ಹಾಗೂ ಇತರೆ ಬೇರೆ ಹಬ್ಬಗಳು ಬರುತ್ತವೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದರೆ ಬಹುತೇಕ ಎಲ್ಲ ಹಬ್ಬ ಹರಿದಿನಗಳ ಆಚರಣೆಗೆ ಕೊಕ್ಕೆ ಬೀಳುವುದು ಖಚಿತ.


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ