ಜೋಯಿಡಾ: ಗೋವಾ-ಕರ್ನಾಟಕ ಗಡಿಭಾಗದ ಅನಮೋಡ ಚೆಕ್ಪೋಸ್ಟ್ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಮದ್ಯ ಸಾಗಾಟದ ಬೃಹತ್ ಜಾಲವೊಂದನ್ನು ಭೇದಿಸಿದ್ದಾರೆ.
ಗುಜರಾತ್ನ ರಾಜ್ಕೋಟ್ ಮೂಲದ ಯೋಗೇಶಭಾಯ್ ಕಾಗ್ದಾದ್ ಎಂಬಾತನನ್ನು ಬಂಧಿಸಲಾಗಿದ್ದು, 167 ಲೀಟರ್ ಮದ್ಯ ಸೇರಿದಂತೆ ಒಟ್ಟು ₹45 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಸಿಬ್ಬಂದಿ ವಾಡಿಕೆಯ ತಪಾಸಣೆ ನಡೆಸುತ್ತಿದ್ದ ವೇಳೆ, ಗುಜರಾತ್ ನೋಂದಣಿಯ ಅಶೋಕ್ ಲೇಲ್ಯಾಂಡ್ ಲಾರಿಯೊಂದು ಅನುಮಾನಾಸ್ಪದವಾಗಿ ಬಂದಿದೆ. ವಾಹನವನ್ನು ತಡೆದು ಸಮಗ್ರವಾಗಿ ಪರಿಶೀಲಿಸಿದಾಗ, ಕಾಂಕ್ರೀಟ್ ಪಂಪ್ ಮತ್ತು ಇತರ ಯಂತ್ರೋಪಕರಣಗಳ ಒಳಭಾಗದಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಮದ್ಯದ ಬಾಟಲಿಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಅಧಿಕಾರಿಗಳ ಕಣ್ತಪ್ಪಿಸಲು ಆರೋಪಿ ಯಂತ್ರದೊಳಗೆ ಮದ್ಯ ಸಾಗಿಸುವ ಹೊಸ ಹಾಗೂ ಕುತೂಹಲಕಾರಿ ತಂತ್ರ ಬಳಸಿದ್ದ ಎಂಬುದು ತಪಾಸಣೆ ವೇಳೆ ಬಯಲಾಗಿದೆ.
ಲಾರಿ ಚಾಲಕನಾದ ಗುಜರಾತ್ನ ಯೋಗೇಶಭಾಯ್ ಕಾಗ್ದಾದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಗೋವಾದಲ್ಲಿ ಮದ್ಯ ಖರೀದಿಸಿ, ಅದನ್ನು ಕದ್ದು ಗುಜರಾತ್ಗೆ ಸಾಗಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶವನ್ನು ತಾನು ಹೊಂದಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಈ ಮೂಲಕ ಆತನ ಕಳ್ಳ ಸಾಗಾಟದ ಮಾಸ್ಟರ್ ಪ್ಲಾನ್ ವಿಫಲವಾಗಿದೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 167 ಲೀಟರ್ ಪ್ರಮಾಣದ 925 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಕೇವಲ ಮದ್ಯದ ಮೌಲ್ಯ ₹46,700 ಆಗಿದ್ದು, ಮದ್ಯ ಸಾಗಾಟಕ್ಕೆ ಬಳಸಿದ್ದ ಲಾರಿ ಹಾಗೂ ಕಾಂಕ್ರೀಟ್ ಪಂಪ್ ಯಂತ್ರೋಪಕರಣಗಳು ಸೇರಿ ಒಟ್ಟು ಅಂದಾಜು ₹45 ಲಕ್ಷ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆಗಾಗಿ ದಾಖಲೆಗಳು ಮತ್ತು ಆರೋಪಿಯನ್ನು ದಾಂಡೇಲಿ ವಿಭಾಗದ ಅಬಕಾರಿ ಜಾರಿ ಉಪನಿರೀಕ್ಷಕರಿಗೆ ಹಸ್ತಾಂತರಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗಟ್ಟಲಾಗಿದೆ. ಗಡಿಭಾಗದಲ್ಲಿ ಅಕ್ರಮ ಮದ್ಯ ಸಾಗಾಟಕ್ಕೆ ಬ್ರೇಕ್ ಹಾಕಲು ತಪಾಸಣೆ ಮತ್ತಷ್ಟು ಕಟ್ಟುನಿಟ್ಟಾಗಲಿದೆ ಎಂದು ಅಬಕಾರಿ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
Laxmi News 24×7