ಬೆಂಗಳೂರು, ಏ.30- ಕೊರೊನಾ ಮಹಾಮಾರಿ ಇನ್ನೂ ಮೂರ್ನಾಲ್ಕು ತಿಂಗಳು ಮುಂದುವರಿಯುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ವೃದ್ಧಿ ದೃಷ್ಟಿಯಿಂದ ಮೇ 3ರ ನಂತರ ಕೈಗಾರಿಕೆಗಳನ್ನು ತೆರೆಯುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಇಂದು ಸಂಜೆ ಕೈಗಾರಿಕೆ ತೆರೆಯುವ ಕುರಿತಂತೆ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮೇ 3ಕ್ಕೆ ಲಾಕ್‍ಡೌನ್ ಅವಧಿ ಅಂತ್ಯಗೊಳ್ಳಲಿದ್ದು, 4ರಂದು ಕೇಂದ್ರ ಸರ್ಕಾರದ ಮಾರ್ಗಸೂಚಿ ಬರಲಿದೆ. ನಂತರ ಲಾಕ್‍ಡೌನ್ ಸಡಿಲಿಕೆ ಬಗ್ಗೆ ಗಮನ ಹರಿಸಲಾಗುವುದು ಎಂದು ಸಿಎಂ ಹೇಳಿದರು.
ಕೊರೊನಾ ಸೋಂಕು ಹೆಚ್ಚಿರುವ ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದೆಡೆ ಕೈಗಾರಿಕೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗುವುದು ಎಂದರು.
ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿದೆ. ಇದೇ ರೀತಿ ಸೋಂಕು ಕಡಿಮೆಯಾದರೆ ಮೇ 4ರ ನಂತರ ಇಲ್ಲೂ ಕೂಡ ಕೈಗಾರಿಕೆ ಆರಂಭಕ್ಕೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.
ಕೇವಲ ಕೈಗಾರಿಕೆಗಳನ್ನು ಪ್ರಾರಂಭಿಸಲು ಮಾತ್ರ ಅನುಮತಿ ನೀಡುತ್ತಿದ್ದೇವೆ.
ಇದನ್ನು ಹೊರತುಪಡಿಸಿ ಮಾಲ್, ಹೊಟೇಲ್‍ಗಳ ಆರಂಭಕ್ಕೆ ಅವಕಾಶವನ್ನೇ ನೀಡುವುದಿಲ್ಲ. ಆದರೆ, ಹೊಟೇಲ್‍ಗಳಲ್ಲಿ ಪಾರ್ಸಲ್ ನೀಡಲು ಅನುಮತಿ ನೀಡಲಾಗುವುದು.
ಕೇಂದ್ರದಿಂದ ಲಾಕ್‍ಡೌನ್ ಸಡಿಲಿಕೆ ಬಗ್ಗೆ ಮಾಹಿತಿ ದೊರೆತಿದೆ. ಆದರೆ, ಮೇ 4ರಂದು ಹೊರಬೀಳಲಿರುವ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನಾಧರಿಸಿ ಸಲೂನ್‍ಗಳನ್ನು ತೆರೆಯುವ ಬಗ್ಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ಯಾವ ಯಾವ ಕ್ಷೇತ್ರಗಳಲ್ಲಿ ಸಡಿಲಿಕೆ ನೀಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.