ಅಮರಾವತಿ(ಏ.28): ಕೊರೋನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರಿಗೆ ತಲಾ 2 ಸಾವಿರ ನೀಡುವುದಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಘೋಷಿಸಿದೆ. ಸೋಂಕಿತರು ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಾದ ಆಹಾರ ಖರೀದಿಸಲು ಈ ಹಣ ನೀಡಲಾಗುವುದು ಎಂದು ಜಗನ್ ಹೊರಡಿಸಿದ ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ನಿನ್ನೆಯವರೆಗೂ 1177 ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 235 ಜನರು ಗುಣಮುಖರಾಗಿದ್ದಾರೆ. ಈವರೆಗೂ 31 ಜನರು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇನ್ನು, ಜಗನ್ ಸರ್ಕಾರದ ಪ್ರಕಾರ, 231 ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವರಿಗೆ ಸರ್ಕಾರ ನೀಡುವ 2 ಸಾವಿರ ಧನಸಹಾಯವ ಸಿಗಲಿದೆ.ಇನ್ನು, ಜನ ಕೊರೋನಾ ವಿರುದ್ಧ ಹೋರಾಡಲು ಸಹಕರಿಸಬೇಕು. ದಯವಿಟ್ಟು ಎಲ್ಲರೂ ಮನೆಯಿಂದ ಹೊರಬಾರದೇ ಸರ್ಕಾರದ ಆದೇಶ ಪಾಲಿಸಬೇಕು. ತಮ್ಮೊಂದಿಗೆ ಇಡೀ ರಾಜ್ಯವನ್ನು ಕೊರೋನಾದಿಂದ ಪಾರು ಮಾಡಬೇಕು ಎಂದು ಜನರಲ್ಲಿ ಜಗನ್ ವಿನಂತಿಸಿದ್ದಾರೆ.