ಚಿಕ್ಕಬಳ್ಳಾಪುರ: ನಗರ ಹೊರವಲಯದ ಹಾರೋಬಂಡೆ ಬಳಿಯ ಸಾಯಿಬಾಬಾ ಮಂದಿರ ಆಶ್ರಮದಲ್ಲಿನ 68 ವರ್ಷದ ಸೂಪರ್ ವೈಸರ್ ಗೂ ರೋಗಿ 2,653 ಕೊರೊನಾ ದೃಢವಾಗಿದೆ.
ಆಶ್ರಮದಲ್ಲಿ ಸೂಪರ್ ವೈಸರ್ ಆಗಿದ್ದ ಇವರು ಇತ್ತೀಚೆಗೆ ಬೆಂಗಳೂರಿನ ಎಸ್.ಪಿ.ರೋಡ್‍ಗೆ ಹೋಗಿ ಬಂದಿದ್ದರು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಹೀಗಾಗಿ ಗುರುವಾರ ಇವರ ಗಂಟಲು ದ್ರವ ಮಾದರಿಯನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ 50-50 ಅಂತ ಬಂದಿದೆ.
ಸಂಶಯ ವ್ಯಕ್ತವಾದ ಹಿನ್ನೆಲೆ ಇವರ ಗಂಟಲು ದ್ರವ ಮಾದರಿಯನ್ನ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇಂದು ಇವರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಆಶ್ರಮ ಹಾಗೂ ಸಾಯಿಬಾಬಾ ಮಂದಿರ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಸಂಬಂಧಿ ಜಿ.ಎಚ್.ನಾಗರಾಜ್ ಎಂಬವರದ್ದಾಗಿದೆ. ಸದ್ಯ ಆಶ್ರಮವಮ್ನ ಸೀಲ್‍ಡೌನ್ ಮಾಡಲಾಗಿದೆ.
ಆಶ್ರಮದಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಮೂಲತಃ ಕೇರಳದವರಾಗಿದ್ದು, ಕಳೆದ 3 ವರ್ಷಗಳಿಂದ ಇದೇ ಆಶ್ರಮದಲ್ಲಿ ದೇವಾಲಯ ನಿರ್ಮಾಣಕ್ಕೆ ಬೇಕಾಗುವ ಸಾಮಾಗ್ರಿಗಳನ್ನ ತಂದುಕೊಡುವ, ಉಸ್ತುವಾರಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.
ಚಿನ್ನದಂಗಡಿ ಮಾಲೀಕನ ಮಗಳ ಮಗನಿಗೂ ಸೋಂಕು:
ಜಿಲ್ಲೆಯ ಚಿಂತಾಮಣಿ ನಗರದ ಚಿನ್ನದಂಗಡಿ ಮಾಲೀಕ ಸಂಪರ್ಕಕ್ಕೆ ಒಳಗಾಗಿದ್ದ ಮಗಳ ಮಗನಿಗೂ ಈಗ ಕೊರೊನಾ ದೃಢವಾಗಿದೆ. ಅಂದಹಾಗೆ ಈ ಚಿನ್ನದಂಗಡಿ ಮಾಲೀಕನ ಮಗ, ಮೊಮ್ಮಗ, ಮಗಳು, ಅಳಿಯನಿಗೂ ಕೊರೊನಾ ಸೋಂಕು ದೃಢವಾಗಿತ್ತು. ಈಗ ಮಗಳ 17 ವರ್ಷದ ಮಗನಿಗೂ ಸೋಂಕು ಬಂದಿದೆ. ಹೀಗಾಗಿ ಒಂದೇ ಕುಟುಂಬದ 6 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಸೋಂಕಿತ ರೋಗಿ 648 ಮೊಮ್ಮಗನನ್ನ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ.