ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ 11 ಏತ ನೀರಾವರಿ ಯೋಜನೆ ಜಾರಿಗೆ ಕರ್ನಾಟಕ ನೀರಾವರಿ ನಿಗಮ ಅನುಮತಿ ನೀಡಿದೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಯೋಜನೆಗಳು ಶೀಘ್ರ ಅನುಷ್ಠಾನವಾದರೆ ಇದೊಂದು ಇತಿಹಾಸ ಎಂದು ಹಿರಿಯ ಮುಖಂಡ ಬಿ.ಆರ್.ಸಂಗಪ್ಪಗೋಳ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ 11 ಏತ ನೀರಾವರಿ ಯೋಜನೆಯಿಂದ ಎರಡು ಲಕ್ಷ ಎಕರೆಗೂ ಅಧಿ ಕ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. 9.1 ಟಿಎಂಸಿ ಸಾಮರ್ಥ್ಯದ ಯೋಜನೆ ಇದಾಗಿದೆ. ಈಗಾಗಲೇ ಸರ್ವೇ ಮಾಡಲು ಏಜೆನ್ಸಿ ಗುರ್ತಿಸಲಾಗಿದೆ. ಈವರೆಗೆ ಇಂತಹ ದೊಡ್ಡ ಯೋಜನೆಯನ್ನು ಯಾರೂ ಮಾಡಿಲ್ಲ, ಅದನ್ನು ರಮೇಶ ಜಾರಕಿಹೊಳಿ ಮಾಡಿರುವುದು ರೈತಾಪಿ ಜನರಿಗೆ ದೊಡ್ಡ ಕೊಡುಗೆ ಕೊಟ್ಟಂತಾಗಿದೆ ಎಂದರು.
ಚಿಕ್ಕೋಡಿ ಜಿಲ್ಲೆ ರಚನೆ ಭರವಸೆ: ಕೊರೊನಾ ಸೋಂಕು ಪ್ರಭಾವ ಕಡಿಮೆಯಾದ ಬಳಿಕ ಚಿಕ್ಕೋಡಿ ಜಿಲ್ಲೆ ರಚನೆ ಬಗ್ಗೆ ಸಿಎಂ ಬಳಿ ಚರ್ಚಿಸುತ್ತೇನೆಂದು ಸಚಿವ ರಮೇಶ ಜಾರಕಿಹೊಳಿ ಆಶ್ವಾಸನೆ ನೀಡಿದ್ದಾರೆ. ಚಿಕ್ಕೋಡಿ ಜಿಲ್ಲೆ ಮಾಡಲು ಯಾರು ಯಾರು ರಾಜಕಾರಣ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಸಂಗಪ್ಪಗೋಳ ಕಿಡಿಕಾರಿದರು.
ಚಿಕ್ಕೋಡಿ ಜಿಲ್ಲೆಯ ಘೋಷಣೆ ಬಗ್ಗೆ ನಾಟಕದ ಮಾತು ಹಾಗೂ ಸ್ವಚ್ಛ ಮಾತು ನನಗೆ ಅರ್ಥವಾಗುತ್ತದೆ. ಇವರಿಗೆ ರಾಜಕಾರಣ ಕಲಿಸಿದವನು ನಾನು. ಆದರೆ ರಮೇಶ್ ಜಾರಕಿಹೊಳಿ ಜಿಲ್ಲೆ ಮಾಡುತ್ತೇನೆಂದು ಆಶ್ವಾಸನೆ ಕೊಟ್ಟಿದ್ದಾರೆ. ಇಲ್ಲ ಅಂದರೆ ಇಲ್ಲ, ಹೂಂ ಎಂದರೆ ಹೂಂ ಎನ್ನುವ ಮಾತುಗಳನ್ನು ರಮೇಶ್ ಮಾತನಾಡಿದ್ದಾರೆ. ಇವರ ಮಾತುಗಳನ್ನ ಕೇಳಿದರೆ ಚಿಕ್ಕೋಡಿಯನ್ನು ಜಿಲ್ಲೆ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು. ಚಿಕ್ಕೋಡಿಯಲ್ಲಿ 500 ಹಾಸಿಗೆಯ ಸಿವಿಲ್ ಆಸ್ಪತ್ರೆ ಮಾಡಿ ಎಂದು ಸಚಿವ ರಮೇಶ ಜಾರಕಿಹೊಳಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮನವಿ ಮಾಡಲಾಗಿದೆ. ಇದರಿಂದ ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕಿನ ಗ್ರಾಮೀಣ ಜನರಿಗೆ ಅನುಕೂಲವಾಗುತ್ತದೆ ಎಂದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??