ಬೆಳಗಾವಿ: ಸೊಂಟದಲ್ಲಿ (ಪ್ಯಾಂಟ್‌ಗೆ) ರಿವಾಲ್ವಾರ್ ಇಟ್ಟುಕೊಂಡು ಖಡೇಬಜಾರ್ ರಸ್ತೆಯಲ್ಲಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಾ ಸುತ್ತಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
‘ಆ ವ್ಯಕ್ತಿಯು ರಿವಾಲ್ವಾರ್ ಜೊತೆ ಓಡಾಡುತ್ತಿದ್ದುದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ವೊಂದರ ಮೂಲಕ ಗಮನಕ್ಕೆ ಬಂದಿತ್ತು. ಮಹಾನಗರಪಾಲಿಕೆ ಚುನಾವಣೆ ಮಾದರಿ ನೀತಿಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ವ್ಯಕ್ತಿ ವಿರುದ್ಧ ಕ್ರಮ ವಹಿಸಲಾಗಿದೆ. ಈ ಬಗ್ಗೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.
‘ಆರೋಪಿತನಿಂದ ರಿವಾಲ್ವಾರ್ ಹಾಗೂ ಅದರ ಪರವಾನಗಿ ಜಪ್ತಿ ಮಾಡಲಾಗಿದೆ. ಆಯುಧ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಪರವಾನಗಿ ಪಡೆದು ಆಯುಧಗಳನ್ನು ಹೊಂದಿರುವವರು, ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆಯಾ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕು. ಹೊರಗಿನಿಂದ ಬರುವವರು, ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಆಯುಧಗಳನ್ನು ಇಟ್ಟುಕೊಂಡು ಸಂಚರಿಸಬಾರದು ಎಂದು ಸೂಚಿಸಿದ್ದಾರೆ.