ಬೆಂಗಳೂರು : ಮೈಸೂರು ವಿಭಾಗದಲ್ಲಿ ಪ್ರೌಢ ಶಾಲಾ ಗ್ರೇಡ್-2 ಸಹ ಶಿಕ್ಷಕರಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡುವುದು ಸೇರಿದಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಣ ಸಚಿವರ ಕಚೇರಿ ಎದುರು ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ವಿಧಾನಪರಿಷತ್ ಸದಸ್ಯರು ವಾಪಸು ಪಡೆದಿದ್ದಾರೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಬೇಡಿಕೆಗಳ ಕುರಿತಂತೆ ಬುಧವಾರ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಎಸ್. ಎಲ್. ಭೋಜೆಗೌಡ ಮತ್ತು ರಮೇಶ್ ಗೌಡ ಜೊತೆ ಸಭೆ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕಾಲಮಿತಿಯಲ್ಲಿ ಅನುಷ್ಠಾನಯೋಗ್ಯ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಮೈಸೂರು ವಿಭಾಗದಲ್ಲಿ ಪ್ರೌಢ ಶಾಲಾ ಗ್ರೇಡ್-2 ಸಹ ಶಿಕ್ಷಕರಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡುವ ಸಂಬಂಧದಲ್ಲಿ ಸೆಪ್ಟೆಂಬರ್ 9 ರೊಳಗೆ ಡಿಪಿಸಿ ನಡೆಸಿ ಸೆ.15 ರೊಳಗೆ ಕೌನ್ಸೆಲಿಂಗ್ ನಡೆಸಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಬಡ್ತಿಯಲ್ಲಿನ ಲೋಪಗಳನ್ನು ಸರಿಪಡಿಸಲು ಪ್ರತಿ ವರ್ಷ ಸಹ ಶಿಕ್ಷಕ ವೃಂದದಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ಪ್ರಕ್ರಿಯೆಯನ್ನು ಅಗತ್ಯವಾಗಿ ಕೈಗೆತ್ತಿಕೊಳ್ಳಲು ಸಚಿವರು ಸೂಚನೆ ನೀಡಿದರು.
ಆರ್.ಟಿ.ಇ. ಶುಲ್ಕ ಮರುಪಾವತಿಸಲು 2020-21ನೇ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಿದ ಅನುದಾನದಲ್ಲಿ ಪ್ರಥಮ ಕಂತಿನಲ್ಲಿ ಬಿಡುಗಡೆಯಾಗಿದ್ದ, 275 ಕೋಟಿ ರೂಪಾಯಿ ಅನುದಾನವನ್ನು ಈಗಾಗಲೇ ಶಾಲೆಗಳಿಗೆ ನೀಡಲಾಗಿದೆ. ಬಾಕಿಯಿರುವ 275 ಕೋಟಿ ರೂಪಾಯಿ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಣ ಬಿಡುಗಡೆಯಾದ ತಕ್ಷಣವೇ ಶಾಲೆಗಳಿಗೆ ಆರ್.ಟಿ.ಇ. ಶುಲ್ಕ ಬಾಕಿಯನ್ನು ನೀಡಲಾಗುವುದೆಂದು ತಿಳಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಪ್ರಕ್ರಿಯೆಗೆ ಅನುಗುಣವಾಗಿ ಹಂತಹಂತವಾಗಿ ಪಠ್ಯಪುಸ್ತಕಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದು, 2019-20ನೇ ಸಾಲಿನ ಆರ್.ಟಿ.ಇ ಬಾಕಿ ಮೊತ್ತ ಕೂಡಲೇ ಪಾವತಿಸಲು ಕ್ರಮ ವಹಿಸುವುದು, ಹಳೆಯ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಹೊಸ ಶಾಲೆಗಳಿಗೆ ವಿಧಿಸುತ್ತಿರುವ 2 ಲಕ್ಷ ರೂಪಾಯಿ ಠೇವಣಿ ನೀಡಬೇಕೆಂಬ ನಿಯಮವನ್ನು ಕೈಬಿಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಸದಸ್ಯರು ಒತ್ತಾಯಿಸಿದರು.
: ಮಹದಾಯಿ ಅಂತಿಮ ತೀರ್ಪು ಬರುವ ಮುನ್ನವೇ ಮಲಪ್ರಭಾ ನದಿ ಒತ್ತುವರಿ ತೆರವುಗೊಳಿಸಿ ; ಅಶೋಕ್ ಚಂದರಗಿ ಆಗ್ರಹ
ಎಲ್ಲ ಬೇಡಿಕೆಗಳನ್ನು ಆಲಿಸಿ, ಹಾಜರಿದ್ದ ಇಲಾಖೆಯ ಅಧಿಕಾರಿಗಳೊಂದಿಗೆ ಬೇಡಿಕೆಗಳ ಸಾಧಕ-ಬಾಧಕಗಳು ಕುರಿತಂತೆ ಚರ್ಚೆ ನಡೆಸಿದರು. ಅನುಷ್ಠಾನಯೋಗ್ಯ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲು ಕ್ರಮ ವಹಿಸಲಾಗುವುದೆಂದು ಸುರೇಶ್ ಕುಮಾರ್ ಭರವಸೆ ನೀಡಿದರು.
ಸಚಿವರ ಭರವಸೆಯ ನಂತರ ಸದಸ್ಯರು ಧರಣಿ ಪ್ರಸ್ತಾಪ ಕೈಬಿಟ್ಟಿದ್ದಾರೆ. ಈ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶಿಕ್ಷಣ ಸಚಿವರ ಕಚೇರಿ ಎದರು ಧರಣಿ ನಡೆಸುವ ವಿಚಾರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಭೆಯಲ್ಲಿ ಪ್ರಕಟಿಸಿದರು. ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??