ಬೆಂಗಳೂರು: ಕರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಗ್ರಾಮ ಪಂಚಾಯಿತಿ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ರಾಜ್ಯ ಚುನಾವಣಾ ಆಯೋಗ ಅಕ್ಟೋಬರ್ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳಿವೆ.
ರಾಜ್ಯದ 6025 ಗ್ರಾಪಂಗಳ ಪೈಕಿ ಶೇ.90ರ ಅವಧಿ ಜೂನ್-ಜುಲೈನಲ್ಲಿ ಅಂತ್ಯಗೊಂಡಿತ್ತು. ಕರೊನಾ ಉಲ್ಬಣ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಂವಿಧಾನದತ್ತ ಅಧಿಕಾರ ಬಳಸಿ ‘ಅಸಾಧಾರಣ ಸಂದರ್ಭ’ವೆಂದು ಪರಿಗಣಿಸಿ ಚುನಾವಣೆ ಮುಂದೂಡಿತ್ತು. ರಾಜ್ಯ ಸರ್ಕಾರ ಕೂಡ ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಮೀಸಲಾತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಇದೀಗ ಚುನಾವಣಾ ಪೂರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.
ಮತದಾರರ ಅಂತಿಮ ಪಟ್ಟಿ ಪ್ರಕಟ: ಮತದಾರರ ಅಂತಿಮ ಪಟ್ಟಿ ಪ್ರಕಟಣೆಗೆ ಆ.31 ಕೊನೆಯ ದಿನವಾಗಿದ್ದು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಮೀಸಲಾತಿ ಪಟ್ಟಿಯನ್ನೂ ಜಿಲ್ಲಾಧಿಕಾರಿಗಳು ಅಂತಿಮಗೊಳಿಸಿದ್ದು, ಈ ಪಟ್ಟಿ ಅಂತಿಮಗೊಂಡ 45 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕೆಂದು ಕಾಯ್ದೆಯಲ್ಲಿದೆ. ಹಾಗಾಗಿ ಆಯೋಗ ಅಕ್ಟೋಬರ್ನಲ್ಲಿ ಚುನಾವಣೆ ನಡೆಸಬೇಕಾಗುತ್ತದೆ.
ಕೇಂದ್ರ ಚು. ಆಯೋಗದ ನೀತಿ ಮಾದರಿ: ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಕರೊನಾ ಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಇದು ಗ್ರಾಪಂ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ರಹದಾರಿ ರೂಪಿಸಿಕೊಟ್ಟಿದೆ. ಇದಕ್ಕೆ ಬೇಕಾದ ಮಾರ್ಗಸೂಚಿಯನ್ನು 10-15 ದಿನದಲ್ಲಿ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜಿದ್ದಾಜಿದ್ದಿ ಹೋರಾಟಕ್ಕೆ ಅಖಾಡ: ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷದ ಗುರುತಿನಿಂದ ಕಣಕ್ಕಿಳಿಯುವಂತಿಲ್ಲ. ಆದರೂ ಬಹುತೇಕ ಸ್ಪರ್ಧಿಗಳು ಒಂದಿಲ್ಲೊಂದು ಪಕ್ಷದ ಜತೆ ಗುರುತಿಸಿಕೊಂಡಿರುತ್ತಾರೆ. ಚುನಾವಣೆ ತರುವಾಯ ಗೆಲುವು ಸಾಧಿಸಿದ ತಂತಮ್ಮ ಪಕ್ಷದ ಸದಸ್ಯರ ಸಮಾವೇಶವನ್ನು ಪ್ರಮುಖ ರಾಜಕೀಯ ಪಕ್ಷಗಳು ಆಯೋಜಿಸಿ ಬಲಾಬಲ ಪ್ರದರ್ಶನ ಮಾಡಲಿವೆ. ಹಾಗಾಗಿ ಈ ಚುನಾವಣೆ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.
ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??