ಬೆಂಗಳೂರು, – ವಿದ್ಯಾಗಮ ಯೋಜನೆಯಡಿ ಶಿಕ್ಷಕರಿಗೂ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ರಾಜ್ಯಾದ್ಯಂತ ಶಾಲೆಗಳಿಗೆ ಮೂರು ವಾರಗಳ ಕಾಲ ರಜೆ ಘೋಷಣೆ ಮಾಡಿದೆ.
ವಿಶೇಷವೆಂದರೆ ನಿನ್ನೆಯಷ್ಟೆ ವಿದ್ಯಾಗಮ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಮಕ್ಕಳಿಗೂ ಸೋಂಕು ಹರಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಇದೀಗ ರಾಜ್ಯದ ಹಲವೆಡೆ ಶಿಕ್ಷಕರಿಗೂ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಇದೇ ತಿಂಗಳ 30ರ ವರೆಗೆ ಒಟ್ಟು ಮೂರು ವಾರಗಳ ಕಾಲ ಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಈ ಸಂಬಂಧ ಅಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಕ್ಟೋಬರ್ 12 ರಿಂದ 30ರ ವರೆಗೆ ಶಾಲೆಗಳನ್ನು ತೆರೆಯದಂತೆ ಆದೇಶ ಹೊರಡಿಸಲು ಅಕಾರಿಗಳಿಗೆ ಈಗಾಗಲೇ ನಿರ್ದೇಶನ ಕೊಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿನ್ನೆಯಷ್ಟೆ ಸರ್ಕಾರ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಸೂಚನೆ ನೀಡಿತ್ತು. ಏಕೆಂದರೆ, ಗುಲ್ಬರ್ಗಾ, ದಾವಣಗೆರೆ, ಬೆಳಗಾವಿ, ಕೊಪ್ಪಳ, ರಾಯಚೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಕ್ಕಳಿಗೆ ಸೋಂಕು ಹರಡಿತ್ತು.
ವಿದ್ಯಾಗಮ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದ್ದು, ಸಾರ್ವಜನಿಕ ವಲಯದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಈ ಯೋಜನೆಯನ್ನು ಸ್ಥಗಿತ ಮಾಡಿತ್ತು. ಇದೀಗ ಶಿಕ್ಷಕರಿಗೂ ಕೊರೊನಾ ಕಾಣಿಸಿಕೊಂಡ ಕಾರಣ ಎಚ್ಚೆತ್ತುಕೊಂಡಿರುವ ಸರ್ಕಾರ ಶಾಲೆಗಳಿಗೆ ಮೂರು ವಾರ ರಜೆ ಘೋಷಿಸಿದೆ.
ಇದರ ಜತೆಗೆ ಸಿಎಂ ಯಡಿಯೂರಪ್ಪನವರು ಮುಂಚಿತವಾಗಿಯೇ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಮುಂಚಿತವಾಗಿಯೇ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ.