ಬೆಂಗಳೂರು : ಕೊರೋನಾ ಅವಧಿಯಲ್ಲಿ ಮೃತಪಟ್ಟವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪರಿಹಾರ ನೀಡದಿರುವುದು ಹಾಗೂ ವೇತನ ತಾರತಮ್ಯ ಸೇರಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮಂಗಳವಾರದಿಂದ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿನ ಹೊರ ರೋಗಿ ಸೇವೆಯನ್ನು ಬಹಿಷ್ಕರಿಸಿ ಮುಷ್ಕರ ನಡೆಸುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಘೋಷಿಸಿದೆ.
ಅಲ್ಲದೆ, ಸರ್ಕಾರ ಕೂಡಲೇ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಂಗಳವಾರದಿಂದ ಕೊರೋನಾ ರೋಗಿಗಳು ಹಾಗೂ ತುರ್ತು ಚಿಕಿತ್ಸಾ ಸೇವೆ ಹೊರತುಪಡಿಸಿ ಉಳಿದ ಹೊರರೋಗಿ ಸೇವೆಗಳನ್ನು ಬಹಿಷ್ಕರಿಸುತ್ತೇವೆ. ಕೊರೋನಾ, ಡೆಂಘಿ, ಚಿಕುನ್‌ಗುನ್ಯಾ ಅಂಕಿ-ಅಂಶ ಸರ್ಕಾರಕ್ಕೆ ನೀಡುವುದಿಲ್ಲ. ಸೆ.21ರಂದು ಬೆಂಗಳೂರು ಸುತ್ತಮುತ್ತಲಿನ ವೈದ್ಯಾಧಿಕಾರಿಗಳು, ಸರ್ಕಾರಿ ವೈದ್ಯರು ಬೆಂಗಳೂರು ಚಲೋ ನಡೆಸುತ್ತೇವೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಜಿ.ಎ.
ಶ್ರೀನಿವಾಸ್ ಎಚ್ಚರಿಸಿದ್ದಾರೆ.
ಕೊರೋನಾ ಸಕ್ರಿಯ ಸೋಂಕಿತರು: ದೇಶದಲ್ಲೇ ಬೆಂಗಳೂರಿಗೆ 2ನೇ ಸ್ಥಾನ! ..
ಕೊರೋನಾದಂತಹ ಸಂಕಷ್ಟದ ನಡುವೆಯೂ ವೈದ್ಯರು ಜನರ ಜೀವ ಕಾಪಾಡಲು ತಮ್ಮ ಜೀವ ಮುಡುಪಿಟ್ಟು ಕೆಲಸ ಮಾಡಿದ್ದಾರೆ. ಆದರೆ ನಮ್ಮ ಸೇವೆಗೆ ಸರ್ಕಾರ ಬೆಲೆ ನೀಡುತ್ತಿಲ್ಲ. ಹೀಗಾಗಿ ಕಳೆದ ಆಗಸ್ಟ್ 15ರಂದೇ ಮುಷ್ಕರಕ್ಕೆ ನಿರ್ಧರಿಸಿದ್ದರೂ ಸಾಂಕ್ರಾಮಿಕ ಕಾಯಿಲೆ ಕಾರಣಕ್ಕಾಗಿ ಹಿಂಪಡೆದಿದ್ದೆವು. ಆದರೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ನಮ್ಮ ಮನವಿಗಳಿಗೆ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೀಗಾಗಿ ಸೋಮವಾರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ಸೂಕ್ತ ಕ್ರಮವಾಗದಿದ್ದರೆ ಮಂಗಳವಾರದಿಂದಲೇ ಮುಷ್ಕರ ನಡೆಸುತ್ತೇವೆ ಎಂದರು.
ಚಳಿ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ರೂ ಕೊರೋನಾ ತೆಕ್ಕೆಗೆ ಫಿಕ್ಸ್! .
ವೈದ್ಯರ ಬೇಡಿಕೆಗಳೇನು?
ಕೊರೋನಾ ಅವಧಿಯಲ್ಲಿ ಚಿಕಿತ್ಸೆ ನೀಡುತ್ತಿದ್ದ 15 ವೈದ್ಯಾಧಿಕಾರಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ ಹಿರಿಯ ಮಹಿಳಾ ಸಹಾಯಕರು, ಪ್ರಯೋಗಾಲಯ ಸಿಬ್ಬಂದಿ, ಗ್ರೂಪ್-ಡಿ ನೌಕರರು ಸೇರಿ ಹಲವರು ಮೃತಪಟ್ಟಿದ್ದಾರೆ. ಕೊರೋನಾ ಸೇವೆಯಲ್ಲಿದ್ದು ಮೃತಪಟ್ಟಇವರಿಗೆ ಸರ್ಕಾರ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ. ಕೇಂದ್ರದ ಗರೀಬಿ ಕಲ್ಯಾಣ ಯೋಜನೆಯ ವಿಮೆಯಲ್ಲಿಯೂ ಕೊರೋನಾ ಸೋಂಕು ದೃಢಪಟ್ಟಿದ್ದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಇವರೆಲ್ಲರೂ ಕೊರೋನಾ ಕಾರ್ಯ ಒತ್ತಡದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಇವರೂ ಕೊರೋನಾ ಯೋಧರೇ ಆಗಿರುವುದರಿಂದ ಇವರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಲಾಗಿದೆ.
ಜತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯರಿಗೂ ಹಾಗೂ ಆರೋಗ್ಯ ಇಲಾಖೆ ವೈದ್ಯರ ವೇತನಕ್ಕೆ ಸಾಕಷ್ಟುತಾರತಮ್ಯವಿದೆ. ಇದನ್ನು ನಿವಾರಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯ 48 ಮಂದಿ ವೈದ್ಯರ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಬಿಬಿಎಂಪಿ ಜೊತೆ ವಿಲೀನ ಮಾಡಿರುವುದನ್ನು ಹಿಂಪಡೆಯಬೇಕು. ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.