ನಟ ಕಿಚ್ಚ ಸುದೀಪ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. 47ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ ಸುದೀಪ್ ಅವರಿಗೆ ಚಿತ್ರೋದ್ಯಮದಿಂದ, ಅಭಿಮಾನಿ ಗಳಿಂದ, ವಿವಿಧ ಕ್ಷೇತ್ರಗಳ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಪ್ರತಿವರ್ಷ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಸಾರ್ವಜನಿಕವಾಗಿ, ಅದ್ಧೂರಿಯಾಗಿ ಆಚರಿಸಿ ಕೊಂಡು ಬರುತ್ತಿದ್ದ ಕಿಚ್ಚನ ಅಭಿಮಾನಿಗಳ ಬರ್ತ್‌ಡೇ ಸಂಭ್ರಮಾ ಚರಣೆಗೆ ಈ ಬಾರಿ ಕೋವಿಡ್ ಬ್ರೇಕ್ ಹಾಕಿದೆ.
ಹೌದು, ಕೋವಿಡ್ ಲಾಕ್‌ಡೌನ್‌ನ ಕೆಲ ನಿಯಮಗಳು ಇನ್ನೂ ಜಾರಿಯಲ್ಲಿರುವು ದರಿಂದ, ಗುಂಪಾಗಿ ಸಭೆ – ಸಮಾರಂಭಗಳನ್ನು ನಡೆಸುವುದಕ್ಕೆ ಸದ್ಯಕ್ಕೆ ಅನುಮತಿಯಿಲ್ಲ. ಇನ್ನು ತಮ್ಮ ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿರುವ ಸುದೀಪ್, ಈ ಬಾರಿ ತಮ್ಮ ಮನೆಮುಂದೆ ದೊಡ್ಡ ಸಂಖ್ಯೆಯಲ್ಲಿ ಒಟ್ಟುಗೂಡದೆ, ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದ್ದಾರೆ.