ಬೆಂಗಳೂರು, – ಎಲ್‍ಪಿಜಿ ಯಿಂದ ಚಲಾಯಿಸುವ 4 ಸ್ಟ್ರೋಕ್ ಆಟೋ ರಿಕ್ಷಾಗಳಿಗೆ ಅರ್ಹತಾ ಪತ್ರ ಕೊಡಲು ನಿರಾಕರಿಸುವ ಮೂಲಕ ಸಾರಿಗೆ ಆಯುಕ್ತರು ಹಾಗೂ ಆರ್‍ಟಿಓ ಕಚೇರಿಯ ವಾಹನ ನಿರೀಕ್ಷಕರು ತಮ್ಮ ಕಾರ್ಯ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಲು ಹೊರಟಿದ್ದಾರೆ ಎಂದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಆರೋಪಿಸಿದೆ.
ಈಗಾಗಲೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆ. ಪ್ರತಿದಿನ 100ರಿಂದ 200 ರೂ. ಗಳಿಸಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಆದರೆ ಸ್ವಾರ್ಥಕ್ಕಾಗಿ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿ ಮೀರಿ ಆಟೋ ರಿಕ್ಷಾಗಳ ಎಫ್‍ಸಿ ಮಾಡಲು ನಿರಾಕರಿಸುತ್ತಿದ್ದಾರೆ.
ಆಟೋ ರಿಕ್ಷಾ ಎಲ್‍ಪಿಜಿ ಟ್ಯಾಂಕ್‍ಗಳಿಂದ ತೊಂದರೆ ಗಳಾಗಿದ್ದಲ್ಲಿ ದೂರುಗಳ ವರದಿಗಳ ಆಧಾರದಲ್ಲಿ ಸರ್ಕಾರ ಚರ್ಚಿಸಿ ತೀರ್ಮಾನ ಮಾಡಲಿ ಎಂದು ಸಮಿತಿಯ ಅಧ್ಯಕ್ಷ ಎಸ್.ಜಯರಾಂ, ಉಪಾಧ್ಯಕ್ಷ ರುದ್ರಮೂರ್ತಿ, ಕಾರ್ಯಾಧ್ಯಕ್ಷ ಎಂ. ವೆಂಕಟೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಸಾರಿಗೆ ಕಾರ್ಯದರ್ಶಿಗಳಿಗೆ ಸಮಿತಿಯು ಮನವಿ ಪತ್ರ ಸಲ್ಲಿಸಿದೆ. 4 ಸ್ಟ್ರೋಕ್ ಎಲ್‍ಪಿಜಿಯಿಂದ ಚಲಾಯಿಸುವ ಆಟೋಗಳ ಎಫ್‍ಸಿಯನ್ನು ನಿರಾಕರಿಸುತ್ತಿದ್ದಾರೆ. ಇದರಿಂದ ಪ್ರತಿ ಆಟೋಗಳಿಂದ ಎಫ್‍ಸಿ ಶುಲ್ಕ 600 ರೂ, ಹಸಿರು ತೆರಿಗೆ 200 ರೂ. ಸೇರಿ ಒಟ್ಟು 800 ರೂ.ಗಳು ಸರ್ಕಾರಕ್ಕೆ ಬರುವ ರೆವಿನ್ಯೂವನ್ನು ಅಧಿಕಾರಿಗಳು ತಡೆಯುತ್ತಿದ್ದಾರೆ.
ಸಾರಿಗೆ ಆಯುಕ್ತರು ಬೆಂಗಳೂರು ನಗರ ಆರ್‍ಟಿಒಗಳ ಉಸ್ತುವಾರಿ ಹೆಚ್ಚುವರಿ ಆಯುಕ್ತರಿಗೆ ಪತ್ರ ನೀಡಿದ್ದರೂ ಸಹಾ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಮಿತಿಯ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.