ಬೆಂಗಳೂರು, ಮೇ 24- ಹೊರಗಿನಿಂದ ರಾಜ್ಯಕ್ಕೆ ಬಂದವರಿಂದಲೇ ಗಂಡಾಂತರ ಎದುರಾಗಿದೆ. ಇದರಿಂದಾಗಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳದಿಂದ ಹಲವರು ರಾಜ್ಯಕ್ಕೆ ಆಗಮಿಸಿದಾಗ ಅವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇದು ನಮಗೂ ಕೂಡ ಆತಂಕ ತರಿಸಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಕಠಿಣ ನಿಲುವು ತಳೆಯುವುದು ಅನಿವಾರ್ಯವಾಗಿದ್ದು, ಅಕಾರಿಗಳಿಗೂ ಕೂಡ ಕೆಲವು ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾಳೆಯಿಂದ ದೇಶಿಯ ವಿಮಾನಗಳ ಹಾರಾಟ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಬರುವ ಪ್ರಯಾಣಿಕರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್. ಉಳಿದ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ 14 ದಿನ ಹೋಂ ಕ್ವಾರಂಟೈನ್ ಮಾಡಲಾಗುವುದು.
ಏರ್ ಪೋರ್ಟ್ ನಿಂದ ನೇರವಾಗಿ ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ಇದಕ್ಕೆ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾಳೆ ಸುಮಾರು 125 ವಿಮಾನಗಳು ಬೆಂಗಳೂರಿಗೆ ಬರಲಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈಗ ಭದ್ರತೆಯನ್ನು ಹೆಚ್ಚಿಸಿದ್ದು, ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಕಠಿಣ ಕ್ರಮಗಳನ್ನೂ ಕೂಡ ಕೈಗೊಂಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಈಗಾಗಲೇ ರಾಜ್ಯದ ಹಲವು ಕಡೆಗಳಿಂದ 1.5 ಲಕ್ಷ ವಲಸಿಗರನ್ನು ಅವರ ಸ್ವಂತ ಊರಿಗೆ ರೈಲಿನ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
Laxmi News 24×7