ಬೆಂಗಳೂರು, ಏಪ್ರಿಲ್ 26 : ಲಾಕ್ ಡೌನ್ ಮುಗಿದ ಬಳಿಕ ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರು ಹೆಚ್ಚಿನ ಟೋಲ್ ಶುಲ್ಕ ಪಾವತಿ ಮಾಡಬೇಕು. ಹೌದು, ಎನ್‌ಎಚ್‌ಎಐ 5 ರಿಂದ 30 ರೂ. ತನಕ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿದೆ.
ಸಾದಹಳ್ಳಿ ಟೋಲ್ ಗೇಟ್‌ನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಶುಲ್ಕ ಹೆಚ್ಚಳ ಮಾಡಿದೆ. ಕಾರು, ವ್ಯಾನ್, ಜೀಪು ಒಂದು ಕಡೆ ಪ್ರಯಾಣಕ್ಕೆ 90 ರೂ. ಬದಲು 95 ರೂ. ನೀಡಬೇಕಿದೆ.
ಏಳು ಅಥವ ಹೆಚ್ಚಿನ ಆಕ್ಸೆಲ್ ಹೊಂದಿರುವ ವಾಹನಗಳು ಒಂದು ಕಡೆಯ ಪ್ರಯಾಣಕ್ಕೆ 555 ರೂ. ಬದಲು 575 ರೂ. ಪಾವತಿ ಮಾಡಬೇಕು. ವಾಪಸ್ ಬರುವ ಟೋಲ್ ದರಗಳನ್ನು ರೂ. 30ರಷ್ಟು ಹೆಚ್ಚಳ ಮಾಡಲಾಗಿದೆ.
ಬಸ್‌ಗಳು ಮೊದಲು ಒಂದು ಕಡೆಯ ಪ್ರಯಾಣಕ್ಕೆ 280 ರೂ. ಪಾವತಿ ಮಾಡಬೇಕಿತ್ತು. ಅದನ್ನು 290ಕ್ಕೆ ಹೆಚ್ಚಳ ಮಾಡಲಾಗಿದೆ. ಎರಡೂ ಕಡೆಯ ಪ್ರಯಾಣದ ಟೋಲ್ ಒಟ್ಟಿಗೆ ಕಟ್ಟಿದರೆ 420 ರೂ. ಬದಲು 435 ರೂ. ಪಾವತಿಸಬೇಕು.
ಟೋಲ್ ದರ ಹೆಚ್ಚಳದ ಬಳಿಕ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು 190 ರೂ. ಪಾವತಿ ಮಾಡಬೇಕು. ಮಾಸಿಕ ಪಾಸಿನ ದರವನ್ನು 3125 ರೂ.ಗೆ ಏರಿಕೆ ಮಾಡಲಾಗಿದೆ. ಮಾರ್ಚ್ 31ರಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.