ಬೆಂಗಳೂರು: ಮಾಜಿ ಭೂಗತ ಪಾತಕಿ ಮತ್ತು ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಮುತ್ತಪ್ಪ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಜೊತೆಗೆ ದೈಹಿಕವಾಗಿ ಕುಗ್ಗಿ ಹೋಗಿದ್ದರು. ಈಗ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲೆ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮುತ್ತಪ್ಪ ರೈ ಸಾವಿನ ಬಗ್ಗೆ ಉಹಾಪೋಹಗಳು ಹರಿದಾಡುತ್ತಿದ್ದು, ಕೆಲವರು ಮುತ್ತಪ್ಪ ರೈ ಅವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಮುತ್ತಪ್ಪ ರೈ ಅವರು ಚೆನ್ನಾಗಿ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾರೋ ಸಾಮಾಜಿಕ ಜಾಲತಾಣದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಕೆಲ ವರ್ಷಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಮುತ್ತಪ್ಪ ರೈ ಅದಕ್ಕಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈ ನಡುವೆ ಬಹಳ ಕುಗ್ಗಿ ಹೋಗಿದ್ದ ಮುತ್ತಪ್ಪ ರೈ ಅವರು, ಕಳೆದ ಕೆಲ ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸದ್ಯ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಬದುಕಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಮುತ್ತಪ್ಪ ರೈ, ನನಗೆ ಹುಷಾರಿಲ್ಲದಿರುವುದು ನಿಜ. ನನಗೆ ಕ್ಯಾನ್ಸರ್ ಇರುವುದು ನಿಜ. ಮಿರಾಕಲ್ ನಡೆಯುತ್ತಿರುವುದು ನಿಜವಾಗಿದ್ದು, ವಿಲ್ ಪವರ್ ನಿಂದ ಆರೋಗ್ಯವಾಗಿದ್ದೇನೆ. ಅಲ್ಲದೇ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದ್ದು, ಓಕೆ ಆದ್ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ ಎಂದು ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದರು.