ಈ ವರ್ಷದ ಆರಂಭದಲ್ಲಿಯೇ ಒಂದಷ್ಟು ಟಾಕ್ ಕ್ರಿಯೇಟ್ ಮಾಡಿದ್ದ ಚಿತ್ರ ಫ್ಯಾಮಿಲಿ ಪ್ಯಾಕ್. ಈ ಚಿತ್ರ ತಯಾರಿಯ ಕಾಲದಲ್ಲಿಯೇ ಭರಪೂರ ಪ್ರಚಾರ ಪಡೆದುಕೊಂಡಿದ್ದಾರ ಹಿಂದೆ ಬಲವಾದ ಕಾರಣಗಳಿದ್ದಾವೆ. ಇದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರೋ ಚಿತ್ರವೆಂಬುದು ಪ್ರಧಾನ ಕಾರಣವಾಗಿತ್ತು. ಅದಲ್ಲದೇ ಈ ಹಿಂದೆ ಸಂಕಷ್ಟಕರ ಗಣಪತಿ ಎಂಬ ಚೆಂದದ ಚಿತ್ರ ನಿರ್ದೇಶನ ಮಾಡಿದ್ದ ಅರ್ಜುನ್ ಕುಮಾರ್ ಎಸ್ ಫ್ಯಾಮಿಲಿ ಪ್ಯಾಕಿನ ಸಾರಥ್ಯ ವಹಿಸಿಕೊಂಡಿದ್ದಾರೆ. ಅದೂ ಕೂಡ ಫ್ಯಾಮಿಲಿ ಪ್ಯಾಕ್‍ನತ್ತ ಪ್ರೇಕ್ಷಕರು ಆಕರ್ಷಿತರಾಗುವಂತೆ ಮಾಡಿತ್ತು. ಇದೀಗ ಕೊರೊನಾ ಕಾಲದ ಸುದೀರ್ಘ ಶುಷ್ಕ ವಾತಾರವಣದ ಅಂಚಿನಲ್ಲಿ ಫ್ಯಾಮಿಲಿ ಪ್ಯಾಕ್ ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಆಗಿದೆ!
ಪಿಆರ್‍ಕೆ ಸಂಸ್ಥೆಯ ಕಡೆಯಿಂದ ನಿರ್ಮಾಣಗೊಳ್ಳುತ್ತಿರೋ ಸಿನಿಮಾ ಅಂದ ಮೇಲೆ ಅದರ ಬಗ್ಗೆ ಪ್ರೇಕ್ಷಕರಲ್ಲೊಂದು ಮೋಹ ಮೂಡಿಕೊಳ್ಳುತ್ತೆ. ಹಾಗೊಂದು ಟ್ರೆಂಡ್ ಮೂಡಿಸುವಂತಹ ಅಪರೂಪದ ಕಥೆಗಳನ್ನೇ ಪುನೀತ್ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದಲೇ ಅವೆಲ್ಲವೂ ಹಿಟ್ ಆಗಿವೆ. ಇದೀಗ ಮೋಷನ್ ಪೋಸ್ಟರ್ ಮೂಲಕ ಸುದ್ದಿ ಮಾಡುತ್ತಿರೋ ಫ್ಯಾಮಿಲಿ ಪ್ಯಾಕ್ ಪಿಆರ್‍ಕೆ ನಿರ್ಮಾಣದ ಐದನೇ ಕಾಣಿಕೆ. ಇದರಲ್ಲಿ ಲಿಖಿತ್ ಮತ್ತು ಅಮೃತಾ ಅಯ್ಯಂಗಾರ್ ನಾಯಕ ನಾಯಕಿಯಾಗಿ ನಟಿಸಿರೋ ಈ ಚಿತ್ರದಲ್ಲಿ ರಂಗಾಯಣ ರಘು ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮೂರೂ ಪಾತ್ರಗಳ ಝಲಕ್ಕುಗಳು ಈ ಮೋಷನ್ ಪೋಸ್ಟರ್‍ನಲ್ಲಿ ಕಾಣಿಸಿಕೊಂಡಿವೆ. ಇದರ ಜೊತೆ ಜೊತೆಗೇ ಒಂದಿಡೀ ಕಥೆಯ ಬಗ್ಗೆ ನಾನಾ ಕಲ್ಪನೆಗಳು ಸುರುಳಿ ಬಿಚ್ಚಿಕೊಳ್ಳುವಂತೆ ಮಾಡುವಷ್ಟು ಶಕ್ತವಾಗಿಯೂ ಅದು ಮೂಡಿ ಬಂದಿದೆ. ಇದರೊಂದಿಗೆ ನಿರ್ದೇಶಕ ಅರ್ಜುನ್ ಕುಮಾರ್ ಪರಿಣಾಮಕಾರಿಯಾಗಿಯೇ ಮೊದಲ ಛಾಪು ಮೂಡಿಸಿದ್ದಾರೆ. ಸಂಕಷ್ಟಕರ ಗಣಪತಿ ಚಿತ್ರದಲ್ಲಿ ಅರ್ಜುನ್ ಕುಮಾರ್ ಮತ್ತು ಲಿಖಿತ್ ಕಾಂಬಿನೇಷನ್ನು ಯಶ ಕಂಡಿತ್ತು. ಈ ಕಾರಣದಿಂದಲೇ ಅವರ ಎರಡನೇ ಸಮಾಗಮವಾಗಿರೋ ಫ್ಯಾಮಿಲಿ ಪ್ಯಾಕ್‍ನತ್ತ ಎಲ್ಲರ ಚಿತ್ತ ನೆಡುವಂತಾಗಿದೆ. ಆ ಚಿತ್ರದಲ್ಲಿ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ಕಾಯಿಲೆಯ ಮೂಲಕ ಮಜವಾಗಿ ಕಥೆ ಹೇಳಲಾಗಿತ್ತು. ಹಾಗಾದರೆ ಫ್ಯಾಮಿಲಿ ಪ್ಯಾಕ್‍ನೊಳಗೆ ಎಂಥಾ ಕಥೆ ಇರಲಿದೆ ಎಂಬ ಕುತೂಹಲ ಮೂಡಿಕೊಳ್ಳೋದು ಸಹಜ. ಈ ನಿಟ್ಟಿನಲ್ಲಿ ಕೆದಕಿದರೆ ನಿರ್ದೇಶಕರ ಕಡೆಯಿಂದ ರಸವತ್ತಾದ ಒಂದಷ್ಟು ಅಂಶಗಳು ಹೊರಬೀಳುತ್ತವೆ.
ಫ್ಯಾಮಿಲಿ ಪ್ಯಾಕ್ ಕಥೆ ಪಕ್ಕಾ ಕಾಮಿಡಿ ಟ್ರೀಟ್‍ಮೆಂಟ್ ಪಡೆದಿರುವಂತದ್ದು. ಮನೋರಂಜನೆಯ ಹೂರ ಪದರ ಮತ್ತು ಗಹನವಾದ ವಿಚಾರದ ಹೂರಣದೊಂದಿಗೆ ಈ ಕಥೆಯನ್ನು ಸಿದ್ಧಪಡಿಸಲಾಗಿದೆಯಂತೆ. ಅಪ್ಪ-ಅಮ್ಮ ಎಲ್ಲ ಇದ್ದರೂ ಒಂದು ಚೆಂದದ ಕುಟುಂಬಕ್ಕಾಗಿ ಹಂಬಲಿಸೋ ಹುಡುಗನ ಸುತ್ತ ಈ ಕಥೆ ಬಿಚ್ಚಿಕೊಳ್ಳಲಿದೆಯಂತೆ. ಅದನ್ನು ಒಂದಿನಿತೂ ಮುಕ್ಕಾಗದ ಮನರಂಜನೆಯೊಂದಿಗೆ ಕಟ್ಟಿ ಕೊಟ್ಟಿರೋ ರೀತಿಗೆ ಪುನೀತ್ ರಾಜ್‍ಕುಮಾರ್ ಫಿದಾ ಆಗಿದ್ದರಂತೆ. ಈ ಕಾರಣದಿಂದಲೇ ಅವರು ಇದನ್ನು ತಮ್ಮ ಸಂಸ್ಥೆಯ ಮೂಲಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಕೊರೊನಾ ಎಂಬೊಂದು ಕಂಟಕ ಎದುರಾಗದಿದ್ದರೆ ಈ ಹೊತ್ತಿಗೆಲ್ಲ ಫ್ಯಾಮಿಲಿ ಪ್ಯಾಕಿನ ಬಹುತೇಕ ಚಿತ್ರೀಕರಣವಾಗಿರುತ್ತಿತ್ತು. ಆದರೆ ಆರಂಭಿಕ ತಯಾರಿಯ ಹಂತದಲ್ಲಿಯೇ ಕೊರೊನಾ ಬ್ರೇಕ್ ಹಾಕಿತ್ತು. ಇದೀಗ ಮತ್ತೆ ಫ್ಯಾಮಿಲಿ ಪ್ಯಾಕ್ ಚಿತ್ರತಂಡ ಆಕ್ಟಿವ್ ಆಗಿದೆ. ಲಾಕ್‍ಡೌನ್ ಕಾಲದಲ್ಲಿ ಸಾಧ್ಯವಾದಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗಿದೆ. ಈಗಾಗಲೇ ತಾರಾಗಣ ಮತ್ತು ಲೊಕೇಷನ್ನುಗಳೆಲ್ಲವೂ ಫೈನಲ್ ಆಗಿವೆ. ಇನ್ನೇನು ಸರ್ಕಾರದ ಕಡೆಯಿಂದ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಗೋದಕ್ಕಾಗಿ ಚಿತ್ರತಂಡ ಎದುರು ನೋಡುತ್ತಿದೆ.