ಬೆಂಗಳೂರು: ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಹಲವು ತಜ್ಞರು ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇತ್ತ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುಗಳನ್ನು ಚಾಚಿಕೊಳ್ಳುತ್ತಿರುವುದು ಬಹುದೊಡ್ಡ ಸವಾಲಾಗಿದೆ. ಲಾಕ್‍ಡೌನ್, ಸಾಮಾಜಿಕ ಅಂತರ, ಶುಚಿತ್ವ ಕುರಿತು ಜಾಗೃತಿ ಮೂಡಿಸಿದರು ಕೊರೊನಾ ನಿಯಂತ್ರಣ ಮಾತ್ರ ಕಷ್ಟಸಾಧ್ಯವಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿರುವವರಿಗೆ ಚಿಕಿತ್ಸೆ ನೀಡುವುದು ಕೂಡ ವೈದ್ಯ ಲೋಕಕ್ಕೆ ಸವಾಲಾಗಿದೆ. ಪರಿಣಾಮ ಮಾನವನ ದೇಹದಲ್ಲಿನ ರೋಗ ನಿರೋಧ ಶಕ್ತಿ ಹೆಚ್ಚಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟ ನಡೆಸಲು ತಜ್ಞರು ಸಲಹೆ ನೀಡಿದ್ದಾರೆ.
ಕೊರೊನಾ ಸೋಂಕು ವ್ಯಕ್ತಿಯ ದೇಹಕ್ಕೆ ಪ್ರವೇಶಿಸುತ್ತಿದಂತೆ ಆತನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊರೊನಾದಿಂದ ಗುಣಮುಖರಾಗಲು ವ್ಯಕ್ತಿಯ ದೇಹಕ್ಕೆ ವಿಟಮಿನ್ ಡಿ ಅಗತ್ಯವಿರುತ್ತದೆ. ವಿಟಮಿನ್ ಡಿ ವ್ಯಕ್ತಿಯ ರೋಗಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಸೇವಿಸುವ ಮೊಟ್ಟೆ, ಮೀನು, ಮಶ್ರೂಮ್‍ನಲ್ಲಿ ಸಿಗುವ ವಿಟಮಿನ್ ಡಿ ದೇಹಕ್ಕೆ ಸಾಲುವುದಿಲ್ಲ. ಆದ್ದರಿಂದ ಬೆಳಂಬೆಳಗ್ಗೆ ಸೂರ್ಯರಶ್ಮಿಗೆ ಮೈ ಒಡ್ಡುವ ಪರಿಪಾಟ ಬೆಳೆಸಿಕೊಂಡರೆ ಕೊರೊನಾ ವಿರುದ್ಧ ಸಮರ ಸಾರಲು ವಿಟಮಿನ್ ಡಿ ದೇಹಕ್ಕೆ ಲಭ್ಯವಾಗುತ್ತೆ ಎಂಬುವುದು ಬಯೋ ವಿಜ್ಞಾನಿ ದಿವ್ಯಾ ಚಂದ್ರಧರ್ ಅವರ ಅಭಿಪ್ರಾಯವಾಗಿದೆ.
ಕೊರೊನಾ ವೈರಸ್‍ನಿಂದ ದೂರ ಉಳಿಯಲು ಸೂರ್ಯನ ದರ್ಶನ ಮಾಡಿದರೆ ಉತ್ತಮ. ಕೊರೊನಾ ವೈರಸ್ ಪ್ರಭಾವವನ್ನು ಕಡಿಮೆಗೊಳಿಸುವ ಅದ್ಭುತ ಶಕ್ತಿ ಸೂರ್ಯ ಕಿರಣದಲ್ಲಿದೆ. ನಿತ್ಯ ಹದಿನೈದು ನಿಮಿಷ ಸೂರ್ಯನ ಎದುರು ನಿಂತರೆ ಸಾಕು ವ್ಯಕ್ತಿಯ ದೇಹ ಕೊರೊನಾ ವಿರುದ್ಧ ಸಮರ ಸಾರಲು ಸಜ್ಜಾಗುತ್ತೆ. ಹೀಗಾಗಿ ಕೋವಿಡ್ 19 ಸಂಕಟದ ಸಮಯದಲ್ಲಿ ಸೂರ್ಯನ ರಶ್ಮಿಗೆ ಮೈ ಒಡ್ಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ವಿಟಮಿನ್ ಡಿ ಮೀನು, ಚೀಸ್, ಮೊಟ್ಟೆ, ಮೊಸರು, ಮಶ್ರೂಮ್‍ನಲ್ಲಿ ವಿಟಮಿನ್ ಡಿ ಲಭ್ಯವಿದ್ದರೂ ಅಗತ್ಯ ಪ್ರಮಾಣದಲ್ಲಿ ಸಾಕಾಗುವುದಿಲ್ಲ. ಪರಿಣಾಮ ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದರಿಂದ ದೇಹಕ್ಕೆ ಅಗತ್ಯವಿರೋ ಶೇ.90 ರಷ್ಟು ವಿಟಮಿನ್ ಡಿ ಲಭ್ಯವಾಗುತ್ತದೆ. ಈ ವಿಟಮಿನ್ ಡಿ ದೇಹದಲ್ಲಿ ಆ್ಯಂಟಿ ಮೈಕ್ರೊಬಿಯಲ್ ಪೆಪ್ಪೈಡ್ಸ್ ಉತ್ಪಾದಿಸುತ್ತದೆ. ಇದು ಉಸಿರಾಟದ ಸೋಂಕಿನ ಸಮಸ್ಯೆ ವಿರುದ್ಧ ಹೋರಾಟ ಮಾಡುತ್ತದೆ. ಅಲ್ಲದೇ ದೇಹದ ಬಿಳಿ ರಕ್ತ ಕಣಗಳಿಗೆ ಹೊಸ ಚೈತನ್ಯ ನೀಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಇತ್ತೀಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯ ವಿಶ್ವದ ವಿವಿಧ ದೇಶಗಳ ಜನರ ದೇಹದಲ್ಲಿನ ವಿಟಮಿನ್ ಡಿ ಪ್ರಮಾಣದ ಕುರಿತು ಸಮೀಕ್ಷೆ ನಡೆಸಿತ್ತು. ಇದರಲ್ಲಿ ಕಡಿಮೆ ವಿಟಮಿನ್ ಡಿ ಹೊಂದಿದ್ದ ದೇಶದ ಪ್ರಜೆಗಳು ಸೋಂಕಿಗೆ ಹೆಚ್ಚು ಬಲಿಯಾಗಿರುವುದು ಸ್ಪಷ್ಟವಾಗಿತ್ತು. ಅಲ್ಲದೇ ಅಂತಹ ದೇಶಗಳಲ್ಲಿ ವೈರಸ್ ಸೋಂಕಿನ ಸಂಖ್ಯೆಯೂ ಹೆಚ್ಚಿತ್ತು. ಆದರೆ ಭಾರತದಲ್ಲಿ ಸೂರ್ಯನ ಕಿರಣಗಳು ಹೆಚ್ಚು ಲಭ್ಯವಾಗುವ ಅವಕಾಶವಿರುವುದರಿಂದ ಸೂರ್ಯನ ಕಿರಣಗಳಿಗೆ ದೇಹ ಒಡ್ಡುವುದರಿಂದ ವಿಟಮಿನ್ ಡಿ ಲಭಿಸುತ್ತದೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದರೊಂದಿಗೆ ಪ್ರತಿದಿನ ಬೆಳಗ್ಗೆ 6:30 ರಿಂದ 8:30ರ ಅವಧಿಯಲ್ಲಿ ಸೂರ್ಯನಿಗೆ ಮೈ ಒಡ್ಡುವುದು ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿ ಎಂದು ವಿವರಿಸಿದ್ದಾರೆ.