ಬೆಂಗಳೂರು, ಮೇ 25- ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ನಿನ್ನೆ ಪ್ರಾಯೋಗಿಕವಾಗಿ ಮೊದಲ ಭಾನುವಾರ ಲಾಕ್‍ಡೌನ್ ಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿರುವ ಹಿನ್ನಲೆಯಲ್ಲಿ ಇನ್ನೂ ಎರಡು ತಿಂಗಳ ಕಾಲ ಮುಂದುವರೆಸಲು ಸರ್ಕಾರ ತೀರ್ಮಾನಿಸಿದೆ.
ನಿನ್ನೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮನೆಯಿಂದ ಆಚೆ ಬಾರದೆ ತಮಗೆ ತಾವೇ ದಿಗ್ಬಂಧನ ಹಾಕಿಕೊಂಡು, ಕೊರೊನಾ ನಿಯಂತ್ರಿಸಲು ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂಬ ಸಂದೇಶ ಸಾರಿದ್ದರು. ಇದರಿಂದ ಉತ್ತೇಜನಗೊಂಡಿರುವ ಸರ್ಕಾರ ಇನ್ನೂ ಎರಡು ತಿಂಗಳ ಕಾಲ ಪ್ರತಿ ಭಾನುವಾರ ಲಾಕ್‍ಡೌನ್ ಜÁರಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಭಾನುವಾರ ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಕೊಂಚ ಮಟ್ಟಿಗೆ ಕೊರೊನಾ ನಿಯಂತ್ರಣಕ್ಕೆ ಬರುವ ಸಾಧ್ಯತೆಯಿದೆ ಎಂದು ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೀಗಾಗಿ ಇದನ್ನು ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಒಲವು ತೋರಿದ್ದಾರೆ ಎನ್ನಲಾಗಿದೆ.
ಜತೆಗೆ ನಿನ್ನೆಯ ಬೆಳವಣಿಗೆ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೀಡಿರುವ ವರದಿ ನೋಡಿ ಹೊಸ ನಿಯಮ ಜÁರಿ ಮಾಡಲು ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.ಈಗಾಗಲೇ ದೇಶದಲ್ಲಿ ಕೊರೊನಾ ವೈರಸ್ ಭಾರೀ ಪ್ರಮಾಣದಲ್ಲಿ ಹರಡುತ್ತಿದೆ.
ಇತ್ತ ರಾಜ್ಯದಲ್ಲಿ ಕೊರೊನಾ ವೈರಸ್‍ನ ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ಕೇಂದ್ರ ಸರ್ಕಾರದ ಲಾಕ್ ಡೌನ್ ಆದೇಶ ಮೇ 31ರ ವರೆಗೂ ಜಾರಿಯಲ್ಲಿದ್ದರೂ, ರಾಜ್ಯದಲ್ಲಿ ಲಾಕ್‍ಡೌನ್ ಆದೇಶವನ್ನು ಸಡಿಲಿಕೆ ಮಾಡಲಾಗಿದೆ.
ನಿನ್ನೆ ಪ್ರಾಯೋಗಿಕವಾಗಿ ಮೊದಲ ಭಾನುವಾರ ಕಂಪ್ಲೀಟ್ ಲಾಕ್‍ಡೌನ್ ಆದೇಶ ಜಾರಿಗೊಳಿಸಲಾಗಿತ್ತು. ಡಾ.ಕೆ.ಸುಧಾಕರ್ ವರದಿಯ ಪ್ರಕಾರ, ನಿನ್ನೆಯ ಲಾಕ್‍ಡೌನ್ ಬಹುತೇಕ ಯಶಸ್ವಿಯಾಗಿದೆಯಂತೆ. ಹೀಗಾಗಿ, ಭಾನುವಾರದ ಕಂಪ್ಲೀಟ್ ಲಾಕ್‍ಡೌನ್ ಆದೇಶವನ್ನು ಮುಂದಿನ ಎರಡು ತಿಂಗಳುಗಳ ಕಾಲ ಮುಂದುವರೆಸಬಹುದೇ ಎಂಬ ಸಲಹೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಹಿರಿಯ ಸಹೋದ್ಯೋಗಿಗಳ ಜೊತೆಗೆ ಈ ವಾರದೊಳಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲು ಸಿಎಂ ಬಿಎಸ್‍ವೈ ತೀರ್ಮಾನಿಸಿದ್ದಾರೆ. ಕಂಪ್ಲೀಟ್ ಲಾಕ್‍ಡೌನ್ ವೇಳೆ ನಿನ್ನೆ ಪರಿಪಾಲನೆಯಾದಂತೆ ಆದೇಶಗಳು ಪರಿಪಾಲನೆಯಾಗಬೇಕು.
ಆಗ ರಾಜ್ಯದಲ್ಲಿ ಸಾರ್ವಜನಿಕರು ಬದುಕಬಹುದು. ಕೊರೊನಾ ವೈರಸ್‍ನ ಸೋಂಕನ್ನು ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಬಹುದು. ಹೀಗಾಗಿ, ಮುಂದಿನ ಎರಡು ತಿಂಗಳ ಕಾಲ ಭಾನುವಾರ ಕಂಪ್ಲೀಟ್ ಲಾಕ್‍ಡೌನ್ ಮಾಡುವ ಬಗ್ಗೆ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.