ಬೆಂಗಳೂರು, ಮೇ 18- ರಾಜ್ಯದ ಲಾಕ್‍ಡೌನ್ ಜಾರಿಯಿಂದಾಗಿ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಹಾಗೂ ಖಾಸಗಿ ಬಸ್ ಸೇರಿದಂತೆ ವೋಲ್ವಾ, ಊಬರ್, ಆಟೋ ರಿಕ್ಷಾ ಸಂಚಾರ ನಾಳೆಯಿಂದ ಕಾರ್ಯಾರಂಭ ಮಾಡಲಿವೆ.
ನಾಳೆ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಎನ್‍ಡಬ್ಲು ಕೆಎಸ್‍ಆರ್‍ಸಿ, ಎನ್‍ಇ ಕೆಆರ್‍ಟಿಸಿ, ಟ್ಯಾಕ್ಸಿ, ವೋಲಾ, ಊಬರ್ ವಾಹನಗಳು ಕೂಡ ಕಾರ್ಯಾಚರಣೆ ಪ್ರಾರಂಭಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.
ಆದರೆ ಕಡ್ಡಾಯವಾಗಿ ಬಸ್ ಹಾಗೂ ಇತರೆ ವಾಹನಗಳಲ್ಲಿ ಕಡ್ಡಾಯವಾಗಿ ರಾಜ್ಯ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಲೇಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ವೇಳೆ ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಅಂಥವರ ಮೇಲೆ ದಂಡ ಬೀಳಲಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿರುವ ವಿವರಗಳನ್ನು ನೀಡಿದರು.
ರೆಡ್ ಜೋನ್ ಹಾಗೂ ಕಂಟೋನ್ಮೆಂಟ್ ಹೊರತುಪಡಿಸಿ ಉಳಿದ ಕಡೆ ವಾಹನಗಳ ಸಂಚಾರಕ್ಕೆ ಷರತ್ತುಬದ್ದ ಅನುಮತಿಯನ್ನು ನೀಡಲಾಗಿದೆ. ರಾಜ್ಯದಲ್ಲಿ ಮೇ 31ರವರೆಗೆ ಲಾಕ್‍ಡೌನ್ ಮುಂದುವರೆಯಲಿದ್ದು, ಕೆಲವು ಚಟುವಟಿಕೆಗಳಿಗೆ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ ಎಂದು ಹೇಳಿದರು
ಬಸ್‍ಗಳಲ್ಲಿ 30 ಪ್ರಯಾಣಿಕರು ಮಾತ್ರ ಸಂಚರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸುವವರ ಮೇಲೆ ಅಧಿಕಾರಿಗಳು ದಂಡ ವಿಧಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಪ್ರಯಾಣಿಕರ ಹಿತದೃಷ್ಟಿಯಿಂದ ರೆಡ್ ಜೋನ್ ಮತ್ತು ಕಂಟೋನ್ಮೆಂಟ್ ಹೊರುತಪಡಿಸಿ ಉಳಿದ ಕಡೆ ಯಾರ ಅನುಮತಿಯನ್ನು ಪಡೆಯದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಾಳೆ ನಿರ್ಧಿಷ್ಟ ಪ್ರಮಾಣದ ಬಸ್‍ಗಳು ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ನೋಡಿಕೊಂಡು ವಾಹನಗಳ ಸಂಚಾರವನ್ನು ಹೆಚ್ಚಳ ಮಾಡಲಾಗುವುದು ಎಂದರು.
ಇಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣ ಬೆಳೆಸಬಹುದು. ಹೊರ ರಾಜ್ಯದಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಗಾಗಬೇಕೆಂದು ಸೂಚಿಸಿದರು. ಆಟೋ, ಟ್ಯಾಕ್ಸಿಗಳಲ್ಲಿ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಮಾತ್ರ ಚಲಿಸಬೇಕು. ಮ್ಯಾಕ್ಸಿಕ್ಯಾಬ್‍ಗಳಲ್ಲಿ ಚಾಲಕ ಸೇರಿದಂತೆ ಮೂವರಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಚಿನ್ನಬೆಳ್ಳಿ, ದಿನಸಿ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ. ಆದರೆ ಮಾಲ್, ಸಿನಿಮಾ ಥಿಯೇಟರ್, ಹೋಟೆಲ್‍ಗಳಲ್ಲಿ ಯಥಾಸ್ಥಿತಿ ಮುಂದುವರೆಯಲಿವೆ.
ಜಿಮ್ ಹಾಗೂ ಫಿಟ್ನೆಸ್ ಕೇಂದ್ರಗಳು ಮುಂದುವರೆಯಲಿದ್ದು, ಸ್ಟೇಡಿಯಂಗಳಲ್ಲಿ ನಿಯಮಿತವಾಗಿ ಕ್ರೀಡಾಚಟುವಟಿಕೆಗಳು ಮುಂದುವರೆಸಬಹುದು ಎಂದರು. ಪಾರ್ಕ್‍ಗಳಲ್ಲಿ ಬೆಳಗ್ಗೆ 7 ಗಂಟೆಯಿಂದ 9ರವರೆಗೆ ಹಾಗೂ ಸಂಜೆ 5ರಿಂದ 7 ಗಂಟೆವರೆಗೆ ಸಾರ್ವಜನಿಕರು ವಾಯುವಿಹಾರವನ್ನು ನಡೆಸಬಹುದು. ಅಲ್ಲದೆ ಬೀದಿಬದಿ ವ್ಯಾಪಾರಿಗಳು ಕೂಡ ಎಂದಿನಂತೆ ತಮ್ಮ ಚಟುವಟಿಕೆಗಳನ್ನು ನಡೆಸಬಹುದಾಗಿದೆ ಎಂದು ತಿಳಿಸಿದರು.
# ಪ್ರಯಾಣದರ ಹೆಚ್ಚಳ ಇಲ್ಲ:
ಕಳೆದ ಎರಡು ತಿಂಗಳಿನಿಂದ ಸಾರಿಗೆ ಸಂಚಾರ ಸ್ಥಗಿತಗೊಂಡ ಕಾರಣ ನಾಲ್ಕು ನಿಗಮಗಳು ನಷ್ಟದಲ್ಲಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡದೆ ಮುಂದಿನ ದರವೇ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ನಿಗಮಗಳಿಗೆ ನಷ್ಟವಾಗಿದ್ದರೆ ಅದನ್ನು ಸರ್ಕಾರವೇ ಭರಿಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ಹೊರೆಯಾಗದಂತೆ ಹಳೇ ಪ್ರಯಾಣ ದರವೇ ಮುಂದುವರೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥ್‍ನಾರಾಯಣ, ಲಕ್ಷ್ಮಣ್ ಸವದಿ, ಸಚಿವರಾದ ಬಸವರಾಜ್ , ಆರ್.ಅಶೋಕ್, ವಿ.ಸೋಮಣ್ಣ, ಗೋಪಾಲಯ್ಯ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.