ಬೆಂಗಳೂರು(ಮೇ 18): ಲಾಕ್ ಡೌನ್ ಘೋಷಣೆಯಾದಾಗಿನಿಂದಲೂ ಸಾರ್ವಜನಿಕ ಬಸ್ ಸೇವೆ ಸ್ಥಗಿತಗೊಂಡಿದೆ. ಸರ್ಕಾರ ಯಾವಾಗ ಬೇಕಾದರೂ ಬಸ್ ಸೇವೆ ಪುನಾರಂಭಿಸುವ ಸಾಧ್ಯತೆ ಇದೆ. ರಾಜ್ಯದ ಸಾರಿಗೆ ಸಂಸ್ಥೆಗಳು ಬಸ್ ಸಂಚಾರ ಸೇವೆಗೆ ಸಜ್ಜಾಗಿವೆ. ಸಂಚಾರ ವೇಳೆ, ಕೊರೋನಾ ವೈರಸ್ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಕೈಗೊಂಡಿವೆ. ರಾಜ್ಯದ ಅನುಮತಿಗಷ್ಟೇ ಸಾರಿಗೆ ಸಂಸ್ಥೆಗಳು ಕಾಯುತ್ತಿವೆ.
ಇದೇ ವೇಳೆ, ವಿವಿಧ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿರುವುದು ತಿಳಿದುಬಂದಿದೆ. ಲಾಕ್ಡೌನ್ನಿಂದಾಗಿ ಈಗಾಗಲೇ ಸಾಕಷ್ಟು ನಷ್ಟವಾಗಿದೆ. ಬಸ್ ಸಂಚಾರ ಪುನಾರಂಭವಾದರೂ ಆದಾಯ ಬರುವ ಸಾಧ್ಯತೆ ಇಲ್ಲ. ಬಸ್ಸುಗಳಲ್ಲಿ ಸಾಮಾಜಿಕ ಅಂತರ ಪಾಲಿಸಲು ಕಡಿಮೆ ಪ್ರಯಾಣಿರಿರಬೇಕಿರುವುದರಿಂದ ಈಗಿರುವ ದರದಲ್ಲಿ ನಷ್ಟವೇ ಆಗಲಿದೆ. ಆದ್ದರಿಂದ ತಾತ್ಕಾಲಿಕ ಕ್ರಮವಾಗಿ ಶೇ. 30ರಷ್ಟು ಪ್ರಯಾಣ ದರ ಏರಿಸುವ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳುತ್ತಿವೆ. ಇವರ ಪ್ರಕಾರ, ದರ ಏರಿಕೆ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಸಜ್ಜಾಗಿ ನಿಂತಿವೆ ಬಸ್ಸುಗಳು:
ಸಾರಿಗೆ ಸಂಸ್ಥೆಗಳು ತಮ್ಮ ಡಿಪೋದಲ್ಲಿರುವ ಎಲ್ಲಾ ಬಸ್ಸುಗಳನ್ನ ಸರ್ವಿಸ್ ಮಾಡಿ ನಿಲ್ಲಿಸಿವೆ. ಪ್ರತಿಯೊಂದು ಬಸ್ಸಿಗೂ ಸ್ಯಾನಿಟೈಸ್ ಮಾಡಲಾಗಿದೆ. ಎಲ್ಲಾ ಸಿಬ್ಬಂದಿ ವರ್ಗದವರಿಗೂ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ 39 ಸಾವಿರ ಕೆಎಸ್ಆರ್ಟಿಸಿ ಡ್ರೈವರ್, ಕಂಡಕ್ಟರ್ ಮತ್ತಿತರ ಸಿಬ್ಬಂದಿಯ ತಪಾಸಣೆ ಆಗಿದೆ.
ಹಾಗೆಯೇ ಕೊರೋನಾ ವೈರಸ್ ಹರಡದಂತೆ ತಡೆಯಲು ಬಿಎಂಟಿಸಿ ತನ್ನ ಸಿಬ್ಬಂದಿಗೆ ಮಾರ್ಗಸೂಚಿ ನೀಡಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ವೈಯಕ್ತಿಕ ಶುಚಿತ್ವಕ್ಕೆ ಮೊದಲ ಆದ್ಯತೆ ಕೊಡಬೇಕು; ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಆರೋಗ್ಯ ದೃಢೀಕರಣ ಹೊಂದಿದ್ದರೆ ಮತ್ತು ಮಾಸ್ಕ್ ಧರಸಿದರೆ ಮಾತ್ರ ಪ್ರವೇಶ; ಪ್ರವೇಶ ದ್ವಾರದಲ್ಲಿ ಥರ್ಮಲ್ ಟೆಸ್ಟಿಂಗ್ಗೆ ಒಳಪಡುವುದು ಕಡ್ಡಾಯ; ಯಾವುದೇ ವ್ಯಕ್ತಿ ಜೊತೆ ಮೌಖಿಕವಾಗಿ ವ್ಯವಹರಿಸುವಾಗ 6 ಅಡಿ ಅಂತರ ಕಡ್ಡಾಯ; ಕಚೇರಿಯ ಒಳಗೆ ಬರುವಾಗ ಸ್ಯಾನಿಟೈಸರ್ನಿಂದ ಕೈ ಶುಚಿ ಮಾಡಿಕೊಳ್ಳಬೇಕು; ಆದಷ್ಟೂ ಮನೆಯಿಂದಲೇ ಊಟ ತಂದು ಸೇವಿಸಬೇಕು; ಮುಂದಿನ ಆದೇಶದವರೆಗೂ ಬಯೋಮೆಟ್ರಿಕ್ ಬಳಸುವಂತಿಲ್ಲ ಇವೇ ಮುಂತಾದ ಅಂಶಗಳು ಮಾರ್ಗಸೂಚಿಯಲ್ಲಿವೆ.