ನಾನಂತು ಸಚಿವಗಿರಿಗಾಗಿ ಗುಂಪುಗಾರಿಕೆ, ಜಗಳ ಮಾಡಲ್ಲ. ಸಚಿವ ಸ್ಥಾನ ಕರೆದು ಕೊಟ್ಟರೇ ನಿಭಾಯಿಸುತ್ತೇವೆ. ಸಚಿವ ಸ್ಥಾನ ಬೇಕು ಎಂದು ಹಠ ಮಾಡಲ್ಲ. ನಮ್ಮ ನಾಯಕರಾದ ಗೋವಿಂದ ಕಾರಜೋಳ ಅವರು ಇರೋ ತನ ನಾವು ಮಂತ್ರಿ ಸ್ಥಾನ ಕೇಳುವುದಿಲ್ಲ ಎಂದು ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ ಬಿಜೆಪಿ ಪಕ್ಷದ ಚಿಹ್ನೆ ಮೇಲೆ ಮೂರು ಬಾರಿ ಆಯ್ಕೆಯಾಗಿದ್ದೇನೆ. ಅದು ನನ್ನ ತಾಯಿ ಸಮಾನ. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳೇ ನನ್ನ ದೇವರು. ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಹೊರತು ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದರು.
ನಮ್ಮ ಸಮಾಜದ ಗೋವಿಂದ ಕಾರಜೋಳ ಅವರು ಈಗಾಗಲೇ ಸಚಿವರಿದ್ದಾರೆ. ಎಲ್ಲ ಸಮಾಜಗಳಿಗೆ ಒಂದೊಂದು ಖಾತೆ ಕೊಟ್ಟಿದ್ದಾರೆ. ಹೀಗಾಗಿ ನಾವು ಸಚಿವ ಸ್ಥಾನ ಕೇಳುವ ಪ್ರಶ್ನೆಯೇ ಇಲ್ಲ. ಈಗ ನಿಗಮ ಮಂಡಳಿ ಅಧ್ಯಕ್ಷ ಕೊಟ್ಟಿದ್ದಾರೆ. ನಿಗಮದಲ್ಲಿ ದುಡ್ಡಿಲ್ಲ, ಹೀಗಾಗಿ ದುಡ್ಡು ಕೊಡಿ ಎಂದು ಬೇಡಿಕೆ ಇಟ್ಟಿದ್ದೇವೆ. ದುಡ್ಡು ಕೊಟ್ಟರೆ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದಿ ಜಾಂಬವ ನಿಗಮ ಹೊಸ ನಿಗಮ ಹೀಗಾಗಿ 500 ಕೋಟಿ ರೂಪಾಯಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದರು.
ಉಮೇಶ ಕತ್ತಿ ಅವರ ಸಭೆಗೆ ನಾನು ಹೋಗಿರಲಿಲ್ಲ. ನನ್ನ ಹುಟ್ಟು ಹಬ್ಬದ ನಿಮಿತ್ಯ ನಾನು ದೇವರಿಗೆ ಹೋಗಿದ್ದೆ. ಪ್ರತಿವರ್ಷ ಜನವರಿ 21ರಂದು ಹುಟ್ಟು ಹಬ್ಬದ ನಿಮಿತ್ಯ ಕಾರ್ಯಕ್ರಮ ಆಯೋಜಿಸುತ್ತಿದ್ದೇವು. ಆದರೆ ಕೊರೊನಾ ಹಿನ್ನೆಲೆ ಹುಟ್ಟು ಹಬ್ಬ ಕಾರ್ಯಕ್ರಮ ರದ್ದು ಮಾಡಿದ್ದೇವು. ಮಹಾಂತೇಶ ಕವಟಗಿಮಠ ಅವರು ಫೋನ್ ಮಾಡಿ ಸಭೆಗೆ ಕರೆದಿದ್ದರು. ನನಗೆ ಸಭೆಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಎರಡು ಗುಂಪು ಆಗಿವೆ. ಇದಕ್ಕೂ ನಮಗೂ ಸಂಬಂಧವಿಲ್ಲ. ನಾವು ಸಣ್ಣ ಮಂದಿ, ಅಷ್ಟು ದೊಡ್ಡ ಮಂದಿ ನಾವಲ್ಲ. ನಮಗೆ ಪಕ್ಷ, ಕಾರ್ಯಕರ್ತರು, ಕ್ಷೇತ್ರಕ್ಕೆ ಮಾತ್ರ ಸಿಮೀತ. ಗುಂಪುಗಾರಿಕೆಯನ್ನು ನಾಯಕರು ಸರಿ ಮಾಡುತ್ತಾರೆ. ಜಿಲ್ಲೆಯ ಗುಂಪುಗಾರಿಕೆ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇವೆ. ಹೈಕಮಾಂಡ್ ಗಮನಕ್ಕೆ ಇದನ್ನು ತರುತ್ತೇವೆ. ಎರಡು ಗುಂಪುಗಳನ್ನು ಒಂದು ಮಾಡುತ್ತೇವೆ. ಎಲ್ಲರೂ ಒಗ್ಗಟ್ಟಿನಿಂದ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ್ ಚುನಾವಣೆ ಎದುರಿಸುತ್ತೇವೆ. ಇನ್ನು ನಾವು ಯಾರ ಜೊತೆಗೂ ಇಲ್ಲ, ಬಿಜೆಪಿ ಪಕ್ಷದ ಪರವಾಗಿ ಇದ್ದೇವೆ ಎಂದು ದುರ್ಯೋಧನ ಐಹೊಳೆ ಸ್ಪಷ್ಟಪಡಿಸಿದರು.