ಬಾಗಲಕೋಟೆ: ಜಿಲ್ಲೆಯ ಪೊಲೀಸರಲ್ಲಿ ತಲ್ಲಣ ಸೃಷ್ಟಿಸಿದ್ದ 130ಕ್ಕೂ ಹೆಚ್ಚು ಪೊಲೀಸರ ಕ್ವಾರಂಟೈನ್ ಪ್ರಕರಣ ಇದೀಗ ಖಾಕಿ ಪಡೆಯನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದು, 80ಕ್ಕೂ ಹೆಚ್ಚು ಪೊಲೀಸರ ವರದಿ ನೆಗೆಟಿವ್ ಬಂದಿದೆ.
ಮುಧೋಳ ಠಾಣೆಯ ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇವರೊಂದಿಗೆ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕ ಹೊಂದಿದ್ದ ಹಿನ್ನೆಲೆ 130ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಇದರಲ್ಲಿ ಶೇ.90ರಷ್ಟು ಸಿಬ್ಬಂದಿಯ ಗಂಟಲು ದ್ರವ, ರಕ್ತ ಪರೀಕ್ಷೆ ಮಾಡಲಾಗಿದೆ. 80ಕ್ಕೂ ಹೆಚ್ಚು ಪೊಲೀಸರ ಗಂಟಲು ದ್ರವ, ರಕ್ತ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಈ ಮೂಲಕ ಮುಧೋಳ, ಜಮಖಂಡಿ ತಾಲೂಕಿನ ಪೊಲೀಸ್ ಠಾಣೆ ಸಿಬ್ಬಂದಿ ಸೇಫ್ ಆಗಿದ್ದಾರೆ.
ನೂರಕ್ಕೂ ಅಧಿಕ ಪೊಲೀಸರ ಕ್ವಾರಂಟೈನ್ ಅವಧಿ ಮುಕ್ತಾಯದ ಹಂತ ತಲುಪಿದ್ದು, ಇನ್ನೆರಡು ದಿನಗಳಲ್ಲಿ ಮತ್ತೆ ಕರ್ತವ್ಯಕ್ಕೆ ಅಣಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುಧೋಳದಲ್ಲಿ ಒಟ್ಟು ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ತೀವ್ರ ಆತಂಕ ಸೃಷ್ಟಿಸಿತ್ತು. ಈಗ 80 ಪೊಲೀಸರ ವರದಿ ನೆಗೆಟಿವ್ ಬಂದಿದೆ. ಈ ಮೂಲಕ ಬಾಗಲಕೋಟೆ ಜಿಲ್ಲೆಯಲ್ಲಿ ಖಾಕಿ ಪಡೆ ನಿಟ್ಟುಸಿರು ಬಿಟ್ಟಿದೆ.