ಬೆಂಗಳೂರು: ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ-ನಿಪ್ಪಾಣಿ ನಡುವಿನ ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಲಾಗಿದೆ. ಅಲ್ಲದೇ ಚಿಕ್ಕೋಡಿಯಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೂ ಅನುದಾನ ಬಿಡುಗಡೆ ಮಾಡಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಳಗಾವಿ ಜಿಲ್ಲೆಯ ಅಥಣಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. 32 ಕೋಟಿ ರೂ ವೆಚ್ಚದಲ್ಲಿ ಅಥಣಿ-ನಿಪ್ಪಾಣಿ ರಸ್ತೆ ಅಗಲೀಕರಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಹಲವು ಜಿಲ್ಲೆಗಳಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೂ ಅನುಮೋದನೆ ನೀಡಲಾಗಿದೆ. ಚಿಕ್ಕೋಡಿಯಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ 32 ಕೋಟಿ, ಮೂಡಿಗೆರೆಯಲ್ಲಿ ಕೋರ್ಟ್ ನ ಕಟ್ಟಡ ನಿರ್ಮಾಣಕ್ಕೆ 11 ಕೋಟಿ ಅನುದಾನ ನೀಡಲು ಅನುಮತಿ ಸಿಕ್ಕಿದೆ.
ಕೋಲಾರ ಕೋರ್ಟ್ ಹೊಸ ಕಟ್ಟಡ ನಿರ್ಮಾಣಕ್ಕೆ 25 ಕೋಟಿ, ಶ್ರೀನಿವಾಸಪುರದಲ್ಲಿ ಕೋರ್ಟ್ ಕಟ್ಟಡಕ್ಕೆ 15 ಕೋಟಿ, ಬಳ್ಳಾರಿ ಪಾರ್ವತಿ ನಗರದಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ 121 ಕೋಟಿ, ರಾಯಚೂರು ಜಿಲ್ಲಾ ಕೋರ್ಟ್ ನ ಹೊಸ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ನೀಡಲಾಗುವುದು ಎಂದು ತಿಳಿಸಿದರು.