ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯ ಅಂತಿಮ ಕಣದಲ್ಲಿ 385 ಅಭ್ಯರ್ಥಿಗಳು ಉಳಿದಿದ್ದಾರೆ.
58 ವಾರ್ಡ್‌ಗಳ ಪೈಕಿ ಬಹುತೇಕ ಕಡೆಗಳಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. ಕೆಲವೆಡೆ ತ್ರಿಕೋನ ಪೈಪೋಟಿ ಕಂಡುಬಂದಿದೆ. ಶುಕ್ರವಾರದಿಂದ ಪ್ರಚಾರ ಕಣ ರಂಗೇರಲಿದೆ.
ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ 468 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಉಮೇದುವಾರಿಕೆ ವಾಪಸ್ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ಒಟ್ಟು 83 ಮಂದಿ ಕಣದಿಂದ ಹಿಂದೆ ಸರಿರಿದ್ದಾರೆ. ಯಾವುದೇ ವಾರ್ಡ್‌ನಲ್ಲೂ ಅವಿರೋಧ ಆಯ್ಕೆಯಾಗಿಲ್ಲ.
ಇಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಚಿಹ್ನೆಯ ಮೇಲೆ ಸ್ಪರ್ಧಿಸುತ್ತಿವೆ. ಆದರೆ, ಎಲ್ಲ 58 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಯಾವುದೇ ಪಕ್ಷದಿಂದಲೂ ಸಾಧ್ಯವಾಗಿಲ್ಲ. ಬಿಜೆಪಿ ಅತಿ ಹೆಚ್ಚು ಅಂದರೆ 55 ವಾರ್ಡ್‌ಗಳಲ್ಲಿ ಸ್ಪರ್ಧಿಸಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇದೆ. ಅದು 45 ವಾರ್ಡ್‌ಗಳಲ್ಲಿ ಕಣಕ್ಕಿಳಿದಿದೆ. ಜೆಡಿಎಸ್ 11, ಆಮ್ ಆದ್ಮಿ ಪಕ್ಷ 27, ಉತ್ತಮ ಪ್ರಜಾಕೀಯ ಪಕ್ಷ 1, ಎಐಎಂಐಎಂ ಪಕ್ಷ 7 ಮತ್ತು ಎಸ್‌ಡಿಪಿಐ ಪಕ್ಷ 1 ವಾರ್ಡ್‌ನಲ್ಲಿ ಉಮೇದಾರುವಾರರನ್ನು ಹಾಕಿದೆ. ಪಕ್ಷೇತರರು ಅತಿ ಹೆಚ್ಚು ಅಂದರೆ 238 ಮಂದಿ ಸ್ಪರ್ಧಿಸಿದ್ದಾರೆ. ಪಕ್ಷೇತರರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತರು (21 ಮಂದಿ), ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವರು ಇದ್ದಾರೆ.
4ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಅಂದರೆ 19 ಮಂದಿ (ಪಕ್ಷೇತರರು 16 ಮಂದಿ) ಕಣದಲ್ಲಿದ್ದಾರೆ. ಉಳಿದೆಡೆ 2ಕ್ಕಿಂತ ಹೆಚ್ಚಿನ ಮಂದಿ ಇದ್ದಾರೆ.
ಈ ಚುನಾವಣೆಯನ್ನು ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದರಿಂದಾಗಿ, ಕಣ ಹಿಂದೆಗಿಂತಲೂ ರಂಗೇರಿದೆ. ಪ್ರಚಾರದಲ್ಲಿ ಬಿಜೆಪಿ ಮುಂದಿದ್ದು, ಈಗಾಗಲೇ ಅಲ್ಲಲ್ಲಿ ಸಭೆಗಳನ್ನು ನಡೆಸಿ ಮತ ಯಾಚಿಸುತ್ತಿದೆ. ಮುಖಂಡರು, ಪದಾಧಿಕಾರಿಗಳು ಮತ್ತು ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ.
ಪಕ್ಷೇತರರಾಗಿ ಕಣಕ್ಕಿಳಿದಿರುವವರಿಗೆ ಚಿಹ್ನೆ ಹಂಚಿಕೆ ಮಾಡುವ ಪ್ರಕ್ರಿಯೆ ಶುಕ್ರವಾರ ನಡೆಯಲಿದೆ. ಮತದಾನ ಸೆ.3ರಂದು ನಡೆಯಲಿದೆ.