ಬೀದರ್: ಪಾಕಿಸ್ತಾನದ ಮೂಲಕ ದೇಶದ ನಾನಾ ರಾಜ್ಯಗಳಿಗೆ ದಾಳಿ ಮಾಡಿರುವ ಮಿಡತೆ ಸೇನೆಗೆ ದೇಶದ ರೈತರು ಆತಂಕಗೊಂಡಿದ್ದಾರೆ. ಈ ಮಿಡತೆ ದಂಡು ಕರ್ನಾಟಕದ ಗಡಿ ಜಿಲ್ಲೆ ಬೀದರಿಗೂ ದಾಳಿ ಮಾಡುವ ಸಾಧ್ಯತೆ ಇದೆ.
ಮಿಡತೆ ಸೈನ್ಯ 500 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ನಾಗಪುರದಲ್ಲಿ ದಾಳಿ ಮಾಡಿವೆ. ಈ ಹಿನ್ನೆಲೆಯಲ್ಲಿ ಈ ಮಿಡತೆ ಸೈನ್ಯ ಗಡಿ ಜಿಲ್ಲೆ ಬೀದರಿಗೆ ದಾಳಿ ಮಾಡುವ ಸಾಧ್ಯತೆಯಿಂದಾಗಿ ಮಿಡತೆ ದಾಳಿ ಎದುರಿಸಲು ಬೀದರ್ ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ತಾಲೂಕುಗಳಾದ ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್‍ನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮಟೆ ಹಾಗೂ ಬಿತ್ತಿ ಪತ್ರ ಹಂಚಲು ಕೃಷಿ ಇಲಾಖೆ ನಿರ್ಧಾರ ಮಾಡಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೃಷಿ ಜಂಟಿ ನಿರ್ದೇಶಕರು ಈಗಾಗಲೇ ಸೂಚನೆ ನೀಡಿದ್ದಾರೆ. ಸೊಲ್ಲಾಪುರ ಕಡೆಯಿಂದ ಬೀದರಿಗೆ ಮಿಡತೆಗಳು ದಂಡು ಎರಡು ದಿನಗಳಲ್ಲಿ ಎಂಟ್ರಿಯಾಗುವ ಸಾಧ್ಯತೆ ಇದೆ.
ಒಟ್ಟು 4 ಲಕ್ಷ ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಕಬ್ಬು, ತರಕಾರಿ ಹಾಗೂ ಹಣ್ಣುಗಳನ್ನು 30 ಸಾವಿರ ಎಕರೆಯಲ್ಲಿ ರೈತರು ಬೆಳೆದಿದ್ದಾರೆ. ಒಂದು ವೇಳೆ ಮಿಡತೆ ದಾಳಿ ಮಾಡಿದರೆ ಎಲ್ಲಾ ರೀತಿ ಕ್ರಿಮಿನಾಶಕಗಳನ್ನ ರೈತ ಸಂಪರ್ಕ ಕೇಂದ್ರದಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ರೈತರಿಗೆ ಒದಗಿಸುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕರಾದ ವಿದ್ಯಾನಂದ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಗಾಳಿ ದಿಕ್ಕು ಬದಲಾದರೆ ಮಧ್ಯಪ್ರದೇಶದ ಕಡೆ ಹೋಗುತ್ತವೆ ಎಂದು ಕೃಷಿ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದು, ಜಿಲ್ಲೆಯ ರೈತರು ಈ ಕಡೆ ಮಿಡತೆ ದಂಡು ಸುಳಿಯದಿರಲಿ ಎನ್ನುತ್ತಿದ್ದಾರೆ.