ಬೆಂಗಳೂರು, : ಮೂರನೇ ಅವಧಿಯ ಲಾಕ್ಡೌನ್ ನಡುವೆಯೂ ಷರತ್ತುಗಳ ನಡುವೆ ಮೇ.04ರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರವು ಸಂಪೂರ್ಣ ಅನುಮತಿ ನೀಡಿದೆ. ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ಭರ್ಜರಿ ಗಳಿಕೆಯೂ ಆಗುತ್ತಿದೆ. ಆದರೆ, ಇದರ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬುತ್ತಿದೆ. ಆದ್ರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.
ಬಾರ್ ಅಂಡ್ ರೆಸ್ಟೋರೆಂಟ್ ಸದ್ಯ ಓಪನ್ ಮಾಡುವ ಚಿಂತನೆ ಇಲ್ಲ, ಬಜೆಟ್ ನಲ್ಲಿ ಹೇಳಿದಂತೆ ಶೇ 6 ರಷ್ಟು ಹಾಗೂ ಈಗ ಶೇ 11ರಷ್ಟು ಸೇರಿಸಿ ಶೇ 17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ, ಈ ಬಗ್ಗೆ ಅಧಿಕೃತ ಅದೇಶದಲ್ಲಿ ವಿವರಣೆ ಸಿಗಲಿದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದರು. ಇನ್ನೂ ಹದಿನೈದು ದಿನಕ್ಕೆ ಬೇಕಾದಷ್ಟು ಮದ್ಯ ನಮ್ಮ ಬಳಿ ಇದೆ. ನಿನ್ನೆಗಿಂತಲೂ ಹೆಚ್ಚು ಆದಾಯ ಇವತ್ತು ಸರ್ಕಾರಕ್ಕೆ ಬಂದಿದೆ.ಇವತ್ತು ಹೊಸ ತೆರಿಗೆ ಸೇರಿದೆ. ಹೀಗಾಗಿ ಹೆಚ್ಚು ರಾಜಧನ ಸರ್ಕಾರಕ್ಕೆ ಬರುತ್ತೆ ಎಂದು ಹೇಳಿದರು.
ಆಂಧ್ರ ಹಾಗೂ ಮಹಾರಾಷ್ಟ್ರ ಮಾದರಿ ಸೇಲ್ ಕೊರೊನಾ ನಿಯಂತ್ರಣಕ್ಕಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹದ ಉದ್ದೇಶದಿಂದ ಮದ್ಯಕ್ಕೆ ಹೆಚ್ಚುವರಿ ಬೆಲೆ ಹಾಕುವುದು ಉತ್ತಮ. ಶೇಕಡ 50 ರಷ್ಟು ಅಲ್ಲದಿದ್ದರೂ ಹೆಚ್ಚು ಮಾಡುವುದು ಒಳಿತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಮದ್ಯಪ್ರಿಯರು ಎಷ್ಟೇ ದುಬಾರಿಯಾದರೂ ಖರೀದಿ ಮಾಡ್ತಾರೆ. ದೆಹಲಿ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಾದರಿ ಅಳವಡಿಸುವ ಬಗ್ಗೆ ಚಿಂತನೆ ಇದ್ದು, ಈ ಸಂಬಂಧ ಚರ್ಚೆ ಮಾಡಲಾಗುವುದು ಎಂದು ಸಚಿವರು ಹೇಳಿದರು.