Breaking News

ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿರಬಹುದು : ಡಾ. ಜಿ ಪರಮೇಶ್ವರ್​​​

Spread the love

ತುಮಕೂರು : ಚುನಾವಣಾ ಪ್ರಚಾರದ ವೇಳೆ ತಮ್ಮ ಮೇಲೆ ಕಲ್ಲೆಸೆತ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ನನ್ನ ಮೇಲೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಎಂದು ಹೇಳಲಾಗುವುದಿಲ್ಲ. ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿರಬಹುದೆಂದು ಎಂದು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಬಿದ್ದ ಕಲ್ಲು ಹೂವಿನಲ್ಲಿ ಬಂತು ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಅದು ತುಂಬಾ ದಪ್ಪ ಇತ್ತು. ಯಾರೋ ದುಷ್ಕರ್ಮಿಗಳು ಕಲ್ಲೆಸೆದಿರಬಹುದು. ನಾನು 35 ವರ್ಷದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನನಗೆ ಶತ್ರುಗಳು ಕಡಿಮೆ‌ ಎಂದು ಹೇಳಿದ್ರು.

ನಿನ್ನೆ ಅರಸಾಪುರ ಪಂಚಾಯತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದೆ. ಬಳಿಕ ಅಲ್ಲಿಂದ ಸಂಜೆ 4.30ರ ಸುಮಾರಿಗೆ ಭೈರೇನಹಳ್ಳಿಗೆ ಪ್ರಚಾರ ಬಂದೆ. ಅಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ವೇಳೆ ನನ್ನನ್ನು ಎತ್ತಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದೆ. ಅಷ್ಟರಲ್ಲಿ ಜೆಸಿಬಿಯಲ್ಲಿ ಹೂವು, ಕ್ರೇನ್ ನಲ್ಲಿ ಹಾರ ಹಾಕೋಕೆ ತಯಾರು ಮಾಡಿದ್ದರು. ಈ ವೇಳೆ ಕಾರ್ಯಕರ್ತರು ನನ್ನನ್ನು ಎತ್ತಿಕೊಂಡಿದ್ದು, ಸಡನ್ ಆಗಿ ಒಂದು ಕಲ್ಲು ಬಂದು ನನ್ನ ತಲೆಗೆ ಬಿತ್ತು. ಆಗ ತಲೆಯಿಂದ ರಕ್ತ ಹರಿಯಲು ಶುರುವಾಯಿತು. ನಾನು ಕೂಗಿಕೊಂಡೆ ಎಂದರು.

ಕೆಂಪು ಹೂವು ಆಗಿದ್ದರಿಂದ ತಲೆಯಲ್ಲಿ ರಕ್ತ ಬರುತ್ತಿರುವುದು ಯಾರಿಗೂ ಗೊತ್ತಾಗಲಿಲ್ಲ. ಬಳಿಕ ನನ್ನ ರಕ್ತವನ್ನು ಗಮನಿಸಿ ಕೆಳಗೆ ಇಳಿಸಿದರು. ಅದಕ್ಕೂ ಮುಂಚೆ ನನ್ನನ್ನು ಭೇಟಿ ಮಾಡೋಕೆ ಅಲ್ಲಿಗೆ ನಮ್ಮ ವೈದ್ಯರೊಬ್ಬರು ಬಂದಿದ್ದರು. ಅವರು ನನ್ನನ್ನು ಅಕ್ಕಿರಾಂಪುರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು. ನಾನು ಪೊಲೀಸರಿಗೆ ತಿಳಿಸಿದ್ದೇನೆ, ಎಸ್ಪಿಗೆ ತಿಳಿಸಿದ್ದೇನೆ. ಕೂಡಲೇ ತನಿಖೆ ಮಾಡಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದೇನೆ ಎಂದು ಪರಮೇಶ್ವರ್​ ತಿಳಿಸಿದರು.

1999ರಲ್ಲೂ ನನ್ನ ಮೇಲೆ ಇದೇ ರೀತಿಯ ಘಟನೆ ನಡೆದಿತ್ತು. ಫಲಿತಾಂಶದ ಬಳಿಕ ವಿಜಯೋತ್ಸವ ಆಚರಿಸುವ ವೇಳೆ ಚಾಕು ಇರಿಯೋದಕ್ಕೆ ಪ್ರಯತ್ನ ನಡೆದಿತ್ತು. ಪದೇ ಪದೇ ಯಾಕೆ ಹೀಗಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈಗ ಒಂದೂವರೆ ಇಂಚು ಗಾಯವಾಗಿದೆ. ಸರ್ಜಿಕಲ್ ಗಮ್ ಹಾಕಿದ್ದಾರೆ. ಸ್ವಲ್ಪ ನೋವಿದೆ. ವೈದ್ಯರು ತಿಳಿಸಿದರೆ ನಾಳೆಯೇ ಪ್ರಚಾರಕ್ಕೆ ಹೋಗುತ್ತೇನೆ ಎಂದರು.

ಪರಮೇಶ್ವರ್ ಮೇಲಿನ ಕಲ್ಲೆಸೆತ ಡ್ರಾಮಾ ಎಂಬ ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಹುಶಃ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು. ನನಗೆ ಅತ್ತು‌ ಕರೆದು ಡ್ರಾಮಾ ಮಾಡಿ ಅಭ್ಯಾಸ ಇಲ್ಲ. ಏಕೆಂದರೆ ಏಟು ತಿಂದವನು ನಾನು, ಅವರಲ್ಲಾ. ಅತ್ತು ಕರೆದು ಹೇಳುವ ಅವಶ್ಯಕತೆ ನನಗೆ ಇಲ್ಲಾ ಎಂದು ಟಾಂಗ್​ ಕೊಟ್ಟರು.

ನಾನು ಜನರ ಮುಂದೆ ಹೋಗ್ತೀನಿ. ನಾನು ಐದು ಬಾರಿ ಗೆದ್ದಿದ್ದೇನೆ, ಎರಡು ಬಾರಿ ಸೋತಿದ್ದೇನೆ. ಸೋಲು ಗೆಲುವು ಎಲ್ಲ ಒಂದೇ. ಕಾರ್ಯಕರ್ತರು ಉದ್ರೇಗಕ್ಕೊಳಗಾಗದೇ ಶಾಂತಿಯಿಂದ ಇರಬೇಕು ಎಂದು ಪರಮೇಶ್ವರ್​ ಮನವಿ ಮಾಡಿದರು. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಅನೇಕರು ಕರೆ ಮಾಡಿ ನನ್ನ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಿದ್ರು


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ