ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ʼಅದಾನಿ ಕೇವಲ ಮ್ಯಾನೇಜರ್ ಮಾತ್ರ, ಕಂಪನಿಯಲ್ಲಿನ ಎಲ್ಲಾ ಹಣವನ್ನು ಪ್ರಧಾನಿ ಮೋದಿಯೇ ಹೂಡಿಕೆ ಮಾಡಿದ್ದಾರೆʼ ಎಂದು ಹೇಳಿದ್ದಾರೆ.
ದಿಲ್ಲಿ ಅಸೆಂಬ್ಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಜೆಪಿಸಿ, ಸಿಬಿಐ ಅಥವಾ ಇಡಿ ತನಿಖೆಯು ಅದಾನಿ ಪತನಕ್ಕೆ ಕಾರಣವಾಗುವುದಲ್ಲ ಬದಲಾಗಿ ಪ್ರಧಾನಿ ಮೋದಿಯವರ ಪತನಕ್ಕೆ ಕಾರಣವಾಗುತ್ತದೆ. ಹಾಗಾಗಿ, ಪ್ರಧಾನಿ ಮೋದಿ ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಇಷ್ಟು ದೊಡ್ಡ ಬಿಕ್ಕಟ್ಟು ಆದ ಮೇಲೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ನೇಹಿತನ ಬಗ್ಗೆ ಏಕೆ ದಯೆ ತೋರಿಸುತ್ತಾರೆ? ಹಿಂಡನ್ ಬರ್ಗ್ ವರದಿ ಬಂದಿದೆ, ಅದರೂ, ಮೋದಿಜಿ ಅದಾನಿಯನ್ನು ಉಳಿಸುವಲ್ಲಿ ತೊಡಗಿದ್ದಾರೆ. ಪ್ರಧಾನಿ ಮೋದಿ ತನ್ನ ಸ್ವಂತ ಕಾಳಜಿ ವಹಿಸದೆ ಅದಾನಿಯನ್ನು ಉಳಿಸುತ್ತಿದ್ದಾರೆಯೇ’ ಎಂದು ಕೇಜ್ರಿವಾಲ್ ಕೇಳಿದ್ದಾರೆ.
‘ಅದಾನಿ ಅವರ ಮ್ಯಾನೇಜರ್ ಮಾತ್ರ. ಪ್ರಧಾನಿ ಮೋದಿಯವರ ಹಣ ನಿರ್ವಹಣೆಗಾಗಿ ಅವರು 10-15% ಕಮಿಷನ್ ಪಡೆಯುತ್ತಿದ್ದಾರೆ. ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದಾಗ, ಮೋದಿಯೂ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದರು. ಈಗ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಲು ಹಾತೊರೆಯುತ್ತಿದ್ದಾರೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.