ಬೆಳಗಾವಿ: ಬೆಳಗಾವಿ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ನಗರದಲ್ಲಿ ಭಾನುವಾರ ಇಡೀ ದಿನ ತುರುಸಿನ ಚಟುವಟಿಕೆಗಳು ನಡೆದವು. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಆಕಾಂಕ್ಷಿಗಳು ಒಬ್ಬರಿಗಿಂತ ಒಬ್ಬರು ಉಮೇದಿನಲ್ಲಿದ್ದಾರೆ.
ಉಪ ಮೇಯರ್ ಸ್ಥಾನಕ್ಕೂ ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್‌ಗಳಲ್ಲಿ ಇನ್ನಿಲ್ಲದ ಕಸರತ್ತು ನಡೆದವು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ ನೇತೃತ್ವದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮುಖಂಡರು ರಾತ್ರಿ ಕೋರ್ ಕಮಿಟಿ ಸಭೆ ನಡೆಸಿದರು. ಅವಿರೋಧ ಆಯ್ಕೆಗೆ ಯಾರೂ ಸಿದ್ಧವಾಗದ ಕಾರಣ ಸೋಮವಾರ ಮತದಾನ ನಡೆಯುವುದು ಬಹುತೇಕ ಖಚಿತವಾಗಿದೆ.
ಮೇಯರ್ ಸ್ಥಾನ ‘ಸಾಮಾನ್ಯ ಮಹಿಳೆ’ ಮತ್ತು ಉಪಮೇಯರ್ ‘ಹಿಂದುಳಿದ ವರ್ಗ ಬಿ ಮಹಿಳೆ’ಗೆ ಮೀಸಲಾಗಿದೆ. 58 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 35 ಸ್ಥಾನಗಳೊಂದಿಗೆ ಬಿಜೆಪಿ ಬಹುಮತ ಗಳಿಸಿದೆ. ಕಾಂಗ್ರೆಸ್ 10, ಎಐಎಂಐಎಂ 1 ಸ್ಥಾನ ಗೆದ್ದರೆ, 12 ವಾರ್ಡ್‌ಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿವೆ. ಪಕ್ಷೇತರವಾಗಿ ಗೆದ್ದ 12 ಮಂದಿಯಲ್ಲಿ ಇಬ್ಬರು ಬಿಜೆಪಿ ಪರವಾಗಿ ಮತ್ತೆ ಇಬ್ಬರು ಎಂಇಎಸ್ ಬೆಂಬಲಿತರಾಗಿ ನಿಂತಿದ್ದಾರೆ.
ಉಪಮೇಯರ್‌ಗೂ ಕಸರತ್ತು: ಉಪಮೇಯರ್ ಮೀಸಲಾತಿಗೆ ಬಿಜೆಪಿಯಲ್ಲಿ ರೇಷ್ಮಾ ಪಾಟೀಲ ಅರ್ಹ ಇದ್ದು, ಈಗಾಗಲೇ ಹಿಂದುಳಿದ ವರ್ಗ ಬ-ಮಹಿಳೆ ಪ್ರಮಾಣ ಪತ್ರ ಕೂಡ ತೆಗೆಸಿಟ್ಟುಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ. ಆದರೆ, ರೇಷ್ಮಾ ಅವರು ದೊಡ್ಡ ಮೊತ್ತದ ತೆರಿಗೆ ಪಾವತಿದಾರರಿದ್ದಾರೆ. ಹಾಗಾಗಿ, ಅವರಿಗೆ ಮೀಸಲಾತಿ ಪ್ರಮಾಣ ಪತ್ರ ಅನ್ವಯ ಆಗುವುದಿಲ್ಲ ಎನ್ನುವುದು ಕಾಂಗ್ರೆಸ್ ನಾಯಕರ ವಾದ. ಇದರ ಬಲಾಬಲ ಏನಾಗುತ್ತದೆ ಎನ್ನುವುದು ಪಾಲಿಕೆಯಲ್ಲಿ ನಡೆಯುವ ಚುನಾವಣೆ ವೇಳೆ ಗೊತ್ತಾಗಲಿದೆ.
Laxmi News 24×7